ಮಂದಾರ ಸಂತ್ರಸ್ತರಿಗೆ ಪುನರ್ವಸತಿ
ಮಂಗಳೂರು, ಅ.11: ಪಚ್ಚನಾಡಿ ಡಂಪಿಂಗ್ ವಾರ್ಡ್‌ನಲ್ಲಿ ತ್ಯಾಜ್ಯ ಕುಸಿತದಿಂದ ಮನೆಯನ್ನು ಕಳಕೊಂಡ ಸುಮಾರು 18 ಕುಟುಂಬಗಳಿಗೆ ಬೈತುರ್ಲಿಯಲ್ಲಿ ಪರ್ಯಾಯ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಜೊತೆಗೆ ಚರ್ಚೆ ನಡೆಸಲಾಗಿದ್ದು, ಘನತ್ಯಾಜ್ಯ ನಿರ್ವಹಣೆಯ ತಂಡವೊಂದು ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಈ ವರದಿಯ ಆಧಾರದಲ್ಲಿ ಸಂತ್ರಸತಿ ಕುಟುಂಬಗಳಿಗೆ ಶಾಶ್ವತ ಪುನರ್ವಸತಿಗೆ ವಸತಿ ಗೃಹ ನಿರ್ಮಿಸಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಹೌಸಿಂಗ್ ಬೋರ್ಡ್ ಒಪಿಗೆ ನೀಡಿದ್ದು, ಸರಕಾರದ ಅನುಮತಿಯನ್ನು ಎದುರು ನೋಡಲಾಗುತ್ತಿದೆ ಎಂದು ಆಯುಕ್ತ ಶಾನಾಡಿ ತಿಳಿಸಿದರು.
ಪಾಲಿಕೆ ಅಧಿಕಾರಿಗಳಿಗೆ ವಾಕಿಟಾಕಿ
ಈ ಹಿಂದಿನಂತೆ ಪಾಲಿಕೆಯ ಪ್ರಮುಖ ಅಧಿಕಾರಿ ಹಾಗೂ ಸಿಬ್ಬಂದಿಗೆ ಮತ್ತೆ ವಾಕಿಟಾಕಿ ಸೌಲಭ್ಯ ಒದಗಿಸಲಾಗುವುದು. ವಾಕಿಟಾಕಿ ಮೂಲಕ ತ್ವರಿತವಾಗಿ ಸಂವಹನ ನಡೆಸಲು ಸಾಧ್ಯ. ಬಳಿಕ ಅದನ್ನು ಕೈಬಿಟ್ಟು ಮೊಬೈಲ್ ಮೂಲಕ ವಾಟ್ಸ್‌ಆ್ಯಪ್ ಗುಂಪುಗಳನ್ನು ರಚಿಸಿ ಸಂದೇಶಗಳನ್ನು ರವಾನಿಸಲಾಗುತ್ತಿತ್ತು. ಆದರೆಅದಕ್ಕಿಂತ ನೇರ ಹಾಗೂ ತ್ವರಿತ ಸಂಪರ್ಕಕ್ಕೆ ವಾಕಿಟಾಕಿ ಮರು ಬಳಕೆಗೆ ಜಿಲ್ಲಾಡಳಿತ ಸಮ್ಮತಿ ವ್ಯಕ್ತಪಡಿಸಿದ್ದು, ಶೀಘ್ರವೇ ವಾಕಿಟಾಕಿ 65 ಹ್ಯಾಂಡ್‌ಸೆಟ್ ಬಳಕೆಯಾಗಲಿದೆ. ಇದರಿಂದಾಗಿ ದಿನದ 24 ಗಂಟೆಯೂ ಅಧಿಕಾರಿ ಹಾಗೂ ಸಿಬ್ಬಂದಿ ಜೊತೆಗೆ ಸಂಪರ್ಕ ಇರಿಸಬಹುಾಗಿದೆ ಎಂದು ಆಯುಕ್ತರು ತಿಳಿಸಿದರು.
ಅಂಗಡಿ ಪರಿಸರ ಸ್ವಚ್ಛ ಇಲ್ಲದಿದ್ದರೆ ಕೇಸ್!
ಇನ್ನು ಮುಂದೆ ಪಾಲಿಕೆ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿರುವ ಅಂಗಡಿ ಮಾಲಕರು ತಮ್ಮ ಅಂಗಡಿ ಪರಿಸರವನ್ನು ಸ್ವಚ್ಛವಾಗಿ ಇಡದಿದ್ದಲ್ಲಿ ದಂಡ ಸಹಿತ ಕೇಸ್ ಎದುರಿಸಬೇಕಾಗುತ್ತೆ ಎಂದು ಆಯುಕ್ತ ಶಾನಾಡಿ ತಿಳಿಸಿದರು.
ಅಂಗಡಿ ಮಾಲೀಕರು ತಮ್ಮಲ್ಲಿರುವ ಕಸವನ್ನು ರಸ್ತೆ ಬದಿ ವಿಲೇವಾರಿ ಮಾಡದೆ, ಕಸದ ತೊಟ್ಟಿಗಳನ್ನು ಇಟ್ಟು ತ್ಯಾಜ್ಯ ವಿಲೇಗೆ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಅನಧಿಕೃತ ಫಲಕಗಳನ್ನು ಅಳವಡಿಸುವವರ ವಿರು್ಧ ಪಾಲಿಕೆ ಕಾರ್ಯಾಚರಣೆ ನಡೆಸಲಿದೆ. ಅಧಿಕೃತ ಹಾಗೂ ಅನಧಿಕೃತ ಫಲಕಗಳ ಅಂಕಿಅಂಶಗಳನ್ನು ಪರಿಶೀಲಿಸಿ ನಡೆಸಲಾಗುವುದು ಎಂದು ಅವರು ಹೇಳಿದರು.







