ಮಂಗಳೂರು: ‘ಮುಕ್ತ ವ್ಯಾಪಾರ ಒಪ್ಪಂದ’ದ ವಿರುದ್ಧ ಕೇಂದ್ರ ಸರಕಾರದ ವಿರುದ್ಧ ಹೈನುಗಾರರ ರ್ಯಾಲಿ

ಮಂಗಳೂರು, ಅ.11: ಕೇಂದ್ರ ಸರಕಾರದ ‘ಮುಕ್ತ ವ್ಯಾಪಾರ ಒಪ್ಪಂದ’ವನ್ನು ವಿರೋಧಿಸಿ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಹೈನುಗಾರರು ನಗರದ ಎಬಿ ಶೆಟ್ಟಿ ವೃತ್ತದಿಂದ ದ.ಕ.ಜಿಲ್ಲಾಧಿಕಾರಿ ಕಚೇರಿಯವರೆಗೆ ರ್ಯಾಲಿ ನಡೆಸಿದರು.
ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡಿ ಭಾರತೀಯ ಹಾಲಿನ ಉತ್ಪನ್ನಗಳನ್ನು ಮುಕ್ತ ವ್ಯಾಪಾರ ಒಪ್ಪಂದದಡಿ ತಂದು ವಿದೇಶಗಳಿಂದ ಆಮದು ಮಾಡಲು ಅವಕಾಶ ಮಾಡಿಕೊಟ್ಟರೆ ದೇಶದ ಹೈನುಗಾರಿಕೆಗೆ ದೊಡ್ಡ ಹೊಡೆತ ಬೀಳುತ್ತದೆ. ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ದೇಶದ ವ್ಯವಸಾಯ ಉತ್ಪನ್ನಗಳಲ್ಲಿ ಶೇ.27ರಷ್ಟು ಪಾಲನ್ನು ಹೈನೋದ್ಯಮ ನೀಡುತ್ತಿದೆ. 2022ನೆ ಸಾಲಿನಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ದೊಡ್ಡ ಹೊಡೆತ ಬೀಳಲಿದೆ ಎಂದರು.
ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೈನುಗಾರಿಕೆಯು ಸಹಕಾರಿ ವ್ಯವಸ್ಥೆಯಡಿ ರೈತರಿಗೆ ಹೆಚ್ಚಿನ ಆದಾಯವನ್ನು ನೀಡುತ್ತಿದ್ದು, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಲು ಮುಕ್ತ ಅವಕಾಶವನ್ನು ನೀಡುವುದರಿಂದ ಲಾಭದಾಯಕವಾದ ಸಹಕಾರಿ ವ್ಯವಸ್ಥೆಯು ಕುಸಿದು ಹೋಗುವ ಆತಂಕವನ್ನು ವ್ಯಕ್ತಪಡಿಸಿದ ರವಿರಾಜ ಹೆಗ್ಡೆ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತಿತರ ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಭೂ ರಹಿತ ಮತ್ತು ಸಣ್ಣ ಹಿಡುವಳಿಯನ್ನು ಹೊಂದಿರುವ ರೈತರೇ ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಲಕ್ಷಾಂತರ ಕುಟುಂಬಗಳಿಗೆ ತೊಂದರೆ ಉಂಟಾಗಲಿದೆ ಎಂದರು.
ಕೇಂದ್ರ ಸರಕಾರವು ಯಾವ ಕಾರಣಕ್ಕೂ ಉದ್ದೇಶಿತ ಮುಕ್ತ ವ್ಯಾಪಾರ ಒಪ್ಪಂದದಡಿ ಭಾರತೀಯ ಹಾಲು ಉತ್ಪನ್ನಗಳನ್ನು ತರಬಾರದು. ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಸಹಕಾರಿಗಳ ಹಿತದೃಷ್ಟಿಯಿಂದ ಅದನ್ನು ಕೈ ಬಿಡಬೇಕು ಎಂದು ರವಿರಾಜ ಹೆಗ್ಡೆ ಒತ್ತಾಯಿಸಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ, ನಿರ್ದೇಶಕ ಸುಚರಿತ ಶೆಟ್ಟಿ, ನಾರಾಯಣ ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.










