‘ನಿಮ್ಮ ಹಣೆಬರಹಕ್ಕೆ ಇಷ್ಟು ಬೆಂಕಿ ಹಾಕ’: ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಸಿದ್ದು ವಿರುದ್ಧದ ಈಶ್ವರಪ್ಪ ಪದ ಬಳಕೆ
'ಸಂಸ್ಕೃತಿ ಗೊತ್ತಿಲ್ಲದವರೊಂದಿಗೆ ಚರ್ಚೆ ಮಾಡುವುದಿಲ್ಲ' ಎಂದ ಸಿದ್ದರಾಮಯ್ಯ
ಬೆಂಗಳೂರು, ಅ. 11: ‘ನಿಮ್ಮ ಹಣೆಬರಹಕ್ಕಿಷ್ಟು ಬೆಂಕಿ ಹಾಕ, ವಿಪಕ್ಷ ನಾಯಕ ಸ್ಥಾನಕ್ಕಾಗಿ ಏನೇನು ಮಾಡಿದ್ದೀಯಾ, ಸಿಎಂ ಆಗಿದ್ದ ವೇಳೆ ಏನೆಲ್ಲಾ ಮಾಡಿದ್ದೀಯಾ ಎಂದು ಗೊತ್ತಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಯೋಗಿಸಿದ ಪದ ಬಳಕೆ ವಿಧಾನಸಭೆಯಲ್ಲಿ ಕೆಲಕಾಲ ಕೋಲಾಹಲ ಸೃಷ್ಟಿಸಿತು.
ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಪ್ರವಾಹ ಪರಿಸ್ಥಿತಿ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, ಪ್ರವಾಹದಿಂದ ಶಾಲಾಮಕ್ಕಳ ಪಠ್ಯ-ಪುಸ್ತಕ ಕೊಚ್ಚಿಹೋಗಿವೆ. ಮಕ್ಕಳಿಗೆ ಓದಲು ಪಠ್ಯ ಪುಸ್ತಕಗಳೇ ಇಲ್ಲ. ಶಿಕ್ಷಣ ಇಲಾಖೆ ಆಯುಕ್ತರು ಇನ್ನೂ ಕೆಲ ದಿನ ಪುಸ್ತಕ ಸಿಗಲ್ಲ ಅಂತಾರೆ, ಹೀಗಾದರೆ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡಬೇಕೆಂದು ಪ್ರಶ್ನಿಸಿದರು.
ಒಬ್ಬೊಬ್ಬ ಸಚಿವರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ‘ಸಂತ್ರಸ್ತರಿಗೆ 10 ಸಾವಿರ ರೂ.ಕೊಟ್ಟಿದ್ದೇ ಹೆಚ್ಚಾಯಿತು’ ಎಂದು ಈಶ್ವರಪ್ಪ ಹೆಸರನ್ನು ಉಲ್ಲೇಖಿಸದೆ ಸಿದ್ದರಾಮಯ್ಯ ವಾಗ್ಬಾಣ ಬಿಟ್ಟದರು. ಇದರಿಂದ ಕೆರಳಿದ ಈಶ್ವರಪ್ಪ ಏರಿದ ಧ್ವನಿಯಲ್ಲಿ ಸ್ಪಷ್ಟನೆ ನೀಡಲು ಮುಂದಾದರು.
ಈಶ್ವರಪ್ಪ ಮಾತುಗಳನ್ನು ಕೇಳಿಸಿಕೊಳ್ಳದೆ ನೆರೆ ಬಂದು ಎಪ್ಪತ್ತು ದಿನಗಳು ಕಳೆದರೂ ಮಕ್ಕಳಿಗೆ ಪಠ್ಯ-ಪುಸ್ತಕ ನೀಡಲು ಆಗಿಲ್ಲ ಎಂದರೆ ರಾಜ್ಯದಲ್ಲಿ ಸರಕಾರ ಜೀವಂತ ಇದೇಯೇ? ಎಂದು ಸಿದ್ದರಾಮಯ್ಯ ಆಡಳಿತಾರೂಢ ಬಿಜೆಪಿ ಸದಸ್ಯರನ್ನು ಮತ್ತಷ್ಟು ಕೆರಳಿಸಿದರು.
ಈ ಹಂತದಲ್ಲಿ ಎದ್ದು ನಿಂತಿದ್ದ ಈಶ್ವರಪ್ಪ ‘ಇದು ರಾಕ್ಷಸಿ ಪ್ರವೃತ್ತಿ, ವಿಪಕ್ಷ ನಾಯಕ ಎಂದು ಜನರಿಗೆ ತೋರಿಸಿಕೊಳ್ಳಬೇಕಿದೆ. ಇವರನ್ನು ಭೇಟಿ ಮಾಡಲು ಸೋನಿಯಾ ಗಾಂಧಿ ಸಮಯವನ್ನೇ ನೀಡಲಿಲ್ಲ. ಕಾಂಗ್ರೆಸ್ ಹುತ್ತದಲ್ಲಿ ಹಾವಾಗಿ ಸಿದ್ದರಾಮಯ್ಯ ಸೇರಿಕೊಂಡಿದ್ದಾರೆ. ಇವರು ನನ್ನ ಬಗ್ಗೆ ಏನು ಹೇಳುವುದು’ ಎಂದು ಏಕವಚನದಲ್ಲಿ ತಿರುಗೇಟು ನೀಡಿದರು.
‘ಉಪಮುಖ್ಯಮಂತ್ರಿ ಆಗಿದ್ದ ಈಶ್ವರಪ್ಪ ಮಂತ್ರಿ ಪದವಿಗೆ ಎಷ್ಟು ಅಂಗಲಾಚಿದ್ದೀರಿ ಎಲ್ಲರಿಗೂ ಗೊತ್ತು. ಸ್ವಾಭಿಮಾನವಿದ್ದರೆ, ಅಥವಾ ನಾನೇನಾದರೂ ನಿಮ್ಮ ಸ್ಥಾನದಲ್ಲಿ ಇದ್ದಿದ್ದರೆ ರಾಜಕೀಯದಲ್ಲೇ ಇರುತ್ತಿರಲಿಲ್ಲ. ಸಂಸ್ಕೃತಿಯೇ ಗೊತ್ತಿಲ್ಲದವರೊಂದಿಗೆ ಚರ್ಚೆ ಮಾಡುವುದಿಲ್ಲ’ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ವಿಪಕ್ಷ ನಾಯಕ ಯಾರನ್ನು ಮಾಡಬೇಕೆಂಬುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಅದು ಈಶ್ವರಪ್ಪನವರಿಗೆ ಏಕೆ? ಎಂದು ಕಾಂಗ್ರೆಸ್ ಪಕ್ಷದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಪರಮೇಶ್ವರ್ ನಾಯ್ಕ, ಎಚ್.ಕೆ.ಪಾಟೀಲ್ ಮುಗಿಬಿದ್ದರು. ಇದರಿಂದ ಕೆಲಕಾಲ ಕೋಲಾಹಲ ಸೃಷ್ಟಿಯಾಯಿತು.
ಆ ಬಳಿಕ ಮಾತು ಮುಂದುವರಿಸಿದ ಸಿದ್ದರಾಮಯ್ಯ, ರಾಜ್ಯದ ಬೊಕ್ಕಸ ಬರಿದಾಗಿದೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಜನರಿಗೆ ಆತ್ಮಸ್ಥೈರ್ಯ ತುಂಬಬೇಕಿರುವ ಮುಖ್ಯಮಂತ್ರಿಯೇ ಇಂತಹ ಹೇಳಿಕೆ ನೀಡುವುದು ಸರಿಯೇ ಎಂದು ಪ್ರಶ್ನಿಸಿದರು.
ನಾನು ಹಾಗೇ ಹೇಳಲಿಲ್ಲ: ಈ ಹಂತದಲ್ಲಿ ಎದ್ದು ನಿಂತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ‘ನಾನು ಹಾಗೇ ಹೇಳಲಿಲ್ಲ’ ಎಂದರು. ನಂತರ ಸಿದ್ದರಾಮಯ್ಯ, ನಿಮ್ಮ ಹೇಳಿಕೆಯೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದನ್ನು ನಾನು ಉಲ್ಲೇಖಿಸಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಕಾಯ್ದೆ ಅನ್ವಯ ಆಗುವುದಿಲ್ಲವೇ: ‘ನನ್ನದು 80 ಎಕ್ರೆ ಕಬ್ಬು ಹಾನಿಯಾಗಿದ್ದು, ನನಗೂ 80 ಲಕ್ಷ ರೂ.ಪರಿಹಾರ ನೀಡಬೇಕು’ ಎಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ ಉಲ್ಲೇಖಿಸಿದ ಸಿದ್ದರಾಮಯ್ಯ, ಅವರಿಗೆ ಭೂ ಸುಧಾಕರಣಾ ಕಾಯ್ದೆ ಅನ್ವಯ ಆಗುವುದಿಲ್ಲವೇ? ಎಂದು ಕಾಲೆಳೆದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸವದಿ, ನೆರೆ ಹಾವಳಿ ವೀಕ್ಷಣೆಗೆ ಸಿಎಂ ಆಗಮಿಸಿದ ವೇಳೆ, ರೈತ ಸಂಘದ ಮುಖಂಡರೊಬ್ಬರು ನನ್ನ ಬಳಿ ಬಂದು 1ಎಕರೆಗೆ 1ಲಕ್ಷ ರೂ. ಪರಿಹಾರ ಕೊಡಿಸುವಂತೆ ಮನವಿ ಸಲ್ಲಿಸಿದರು. ಆ ವೇಳೆ ಹಾಸ್ಯದ ದಾಟಿಯಲ್ಲೇ ಅವರಿಗೆ ಹೇಳಿದ್ದೆ. ಅದನ್ನೇ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ ಎಂದರು.