ಬಿಜೆಪಿಯ ನಿಜಬಣ್ಣ ಬಯಲಾಗುತ್ತಿದೆ: ಪತ್ರಕರ್ತರ ಆಕ್ರೋಶ
ಕಲಾಪಕ್ಕೆ ಕ್ಯಾಮರಾ ನಿರ್ಬಂಧ ಖಂಡಿಸಿ ಪ್ರತಿಭಟನೆ

ಬೆಂಗಳೂರು, ಅ.11: ವಿಧಾನ ಸಭೆ ಕಲಾಪಕ್ಕೆ ವಿದ್ಯುನ್ಮಾನ ಮಾಧ್ಯಮಗಳನ್ನು ನಿರ್ಬಂಧಿಸಿರುವುದನ್ನು ಖಂಡಿಸಿ ಹಾಗೂ ಪುನರ್ ಪರಿಶೀಲನೆಗೆ ಆಗ್ರಹಿಸಿ ಬೆಂಗಳೂರು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಪತ್ರಕರ್ತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ), ಪ್ರೆಸ್‌ಕ್ಲಬ್, ವರದಿಗಾರರ ಕೂಟ, ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್, ಕರ್ನಾಟಕ ಮಹಿಳಾ ಪತ್ರಕರ್ತೆಯರ ಸಂಘದ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ, ರಾಜ್ಯ ಸರಕಾರ ಪತ್ರಕರ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಆ ಮೂಲಕ ಜನತೆಯ ದನಿಯನ್ನು ಇಲ್ಲವಾಗಿಸುವ ಷಡ್ಯಂತ್ರವು ಇದರಲ್ಲಿ ಅಡಗಿದೆ ಎಂದು ಪತ್ರಕರ್ತರು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಸರಕಾರ ವಿರೋಧ ಪಕ್ಷದಲ್ಲಿದ್ದಾಗ ಮಾಧ್ಯಮಪರ, ಜನಪರವಾಗಿರುವಂತೆ ನಟಿಸುತ್ತದೆ. ಆದರೆ, ಆಡಳಿತಕ್ಕೆ ಬರುತ್ತಿದ್ದಂತೆ ಬಿಜೆಪಿ ತನ್ನ ನಿಜಬಣ್ಣವನ್ನು ತೋರಿಸುತ್ತಿದೆ. ಕರ್ನಾಟಕ ಜನತೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಧ್ಯಮ ಕ್ಷೇತ್ರವನ್ನು ನಿರ್ಬಂಧಿಸಲು ಹೊರಟರೆ ಮುಂದಿನ ದಿನಗಳಲ್ಲಿ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಕುಳಿತ ನೀಲಿ ಚಿತ್ರಗಳನ್ನು ವೀಕ್ಷಿಸುತ್ತಾ ಕಾಲಹರಣ ಮಾಡಿದರೆ, ಮಾಧ್ಯಮದವರು ನೋಡಿಕೊಂಡು ಸುಮ್ಮನೆ ಇರಬೇಕೆ. ಜನತೆಯಿಂದ ಓಟು ಪಡೆದು ವಿಧಾನಸಭೆಯಲ್ಲಿ ಕುಳಿತುಕೊಳ್ಳುವುದು ನೀಲಿಚಿತ್ರ ನೋಡುವುದಕ್ಕಾಗಿಯೇ. ಪತ್ರಕರ್ತರು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದಕ್ಕೆ ಬಿಜೆಪಿ ಸರಕಾರ ಮಾಧ್ಯಮವನ್ನೇ ನಿರ್ಬಂಧಿಸಲು ಹೊರಟಿರುವುದು ಸರಿಯಲ್ಲವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು, ಐಎಫ್ ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯದರ್ಶಿ ಕಿರಣ್, ಪಬ್ಲಿಕ್ ಟಿವಿಯ ಸಂಪಾದಕ ರಂಗನಾಥ್, ಟಿವಿ9 ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್, ಸುವರ್ಣ ಟಿವಿ ಸುದ್ದಿ ಮುಖ್ಯಸ್ಥ ಅಜಿತ್ ಹನುಮ್ಕಕನವರ್, ದಿಗ್ವಿಜಯ ಟಿವಿ ಸುಭಾಷ್ ಹೂಗಾರ್, ಬಿಟಿವಿಯ ಮುಖ್ಯಸ್ಥ ಕುಮಾರ್, ವರದಿಗಾರರ ಕೂಟದ ವಿಠಲಮೂರ್ತಿ, ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ, ನ್ಯೂಸ್ 18 ಸಂಪಾದಕರು ಸೇರಿ ಹಲವು ಪತ್ರಕರ್ತರು ಭಾಗವಹಿಸಿದ್ದರು.







