'ಪವಿತ್ರ ಆರ್ಥಿಕತೆಗಾಗಿ' ಆರು ದಿನದಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯ
ಫೈಲ್ ಚಿತ್ರ
ಬೆಂಗಳೂರು, ಅ.11: ದೇಶದಲ್ಲಿ ಪವಿತ್ರ ಆರ್ಥಿಕತೆ ಜಾರಿಯಾಗುವುದಕ್ಕೆ ಎಲ್ಲ ಪಕ್ಷಗಳ ಕಾರ್ಯಕರ್ತರು ಕಾರ್ಯಮಗ್ನರಾಗಬೇಕೆಂದು ಹಿರಿಯ ರಂಗಕರ್ಮಿ ಪ್ರಸನ್ನ ತಿಳಿಸಿದ್ದಾರೆ.
ಶುಕ್ರವಾರ ಪವಿತ್ರ ಆರ್ಥಿಕತೆಗಾಗಿ ಒತ್ತಾಯಿಸಿ ನಗರದ ವಲಭ ನಿಕೇತನದಲ್ಲಿ ಕಳೆದ ಆರು ದಿನದಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿ ಮಾತನಾಡಿದ ಅವರು, ಗಾಂಧೀಜಿಯ ಸ್ವರಾಜ್ಯ ಹಾಗೂ ಜೆಪಿ ಅವರ ಹೋರಾಟ ಸೋತಿಲ್ಲ. ಅದು ಅಪೂರ್ಣವಾಗಿದ್ದು, ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಬೇಕಿದೆ ಎಂದರು.
ನನ್ನ ಉಪವಾಸ ಸತ್ಯಾಗ್ರಹವನ್ನು ಕೆಲವು ರಾಜಕೀಯ ಪಕ್ಷಗಳ ಹುನ್ನರ ಹಾಗೂ ಬಿಜೆಪಿ ವಿರುದ್ಧದ ನಡೆಸುತ್ತಿರುವ ಹೋರಾಟ ಎಂದು ಗ್ರಹಿಸಬಹುದು. ನಾವು ಸ್ಪಷ್ಟವಾಗಿದ್ದೇವೆ. ನಾವು ಚುನಾವಣೆಯ ರಾಜಕೀಯಕ್ಕೆ ಬರುವುದಿಲ್ಲ. ದೇಶದ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುವುದು ನಮ್ಮ ಧ್ಯೇಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಗ್ರಾಮ ಸೇವಾ ಸಂಘದಿಂದ ಪವಿತ್ರ ಆರ್ಥಿಕತೆಗಾಗಿ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಸಮಾಜದ ಎಲ್ಲ ವರ್ಗಗಳಿಂದ ಅಸಾಧಾರಣವಾದ ಬೆಂಬಲ ವ್ಯಕ್ತವಾಗಿದೆ. ರಾಜಕೀಯ ಮುಖಂಡರು, ವಿವಿಧ ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು, ಲೇಖಕರು ಹಾಗೂ ಸಾಮಾನ್ಯಜನರು ಸತ್ಯಾಗ್ರಹಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಈ ಎಲ್ಲರಿಗೂ ನಾವು ಋಣಿಯಾಗಿದ್ದೇವೆ ಹಾಗೂ ಹೃದಯ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆಂದು ಅವರು ಹೇಳಿದರು.
ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಪವಿತ್ರ ಆರ್ಥಿಕತೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗೂ ಒಂದು ತಿಂಗಳ ಒಳಗೆ ಕೇಂದ್ರದ ಹಣಕಾಸು ಮಂತ್ರಿ ಹಾಗೂ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಮಂತ್ರಿಗಳ ಜೊತೆಗೆ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ, ಗ್ರಾಮ ಸೇವಾ ಸಂಘವು ಉಪವಾಸ ಸತ್ಯಾಗ್ರಹವನ್ನು ಇಂದು ಅಂತ್ಯಗೊಳಿಸಿ ಶಾಂತ ರೀತಿಯ ಸತ್ಯಾಗ್ರಹವನ್ನು ಚುರುಕುಗೊಳಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.