‘ಮಾತೆ’ಯಾಗಿಯೇ ಶೋಷಣೆಗೊಳಗಾಗುವ ಹೆಣ್ಣು: ವೀಣಾ ಶೆಟ್ಟಿ
‘ಶಕ್ತ್ಯೋಪಾಸನೆ ಮತ್ತು ಸ್ತ್ರೀ ಸಮಾಜ’ ಕುರಿತು ವಾಕ್ಯಗೋಷ್ಠಿ
ಗುರುಪುರ, ಅ.11: ವರ್ಷಗಳ ಹಿಂದೆ ಪುರುಷ ಸಮಾಜವು ಸ್ತ್ರೀಯರಿಗೆ ಕೆಲವು ನಿರ್ಬಂಧ ಹೇರಿತ್ತು. ಅದೇ ಹೊತ್ತಿಗೆ ಹೆಣ್ಣು ಪೂಜನೀಯಳು ಅಥವಾ ‘ಮಾತೆ’ ಎಂಬ ಹೇರಿಕೆ ಅಥವಾ ಒಂದು ಚೌಕಟ್ಟಿನಲ್ಲಿರಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಅಲ್ಲಿಂದ ಮುಂದಕ್ಕೆ ಹೆಣ್ಣು ಮಾತೆಯಾಗಿಯೇ ಶೋಷಣೆಗೊಳಗಾಗುತ್ತಿದ್ದಾಳೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಹೆಣ್ಣು ‘ಮಾತೆ’ ಎಂಬುದಕ್ಕಿಂತಲೂ ಆಕೆ ‘ಶಕ್ತಿ’ ಎಂದು ಹೇಳಬೇಕಾಗುತ್ತದೆ. ಗಂಡಿನಂತೆ ಹೆಣ್ಣಿಗೂ ಸಕಲ ಫಲಾಪೇಕ್ಷೆ ಇದೆ. ಆದ್ದರಿಂದ ಹೆಣ್ಣು ತನ್ನ ‘ಶಕ್ತಿ’ ಮೂಲಕ ಸಾಮಾಜಿಕ ವಂಚನೆ ಅಥವಾ ಶೋಷಣೆಯಿಂದ ಹೊರ ಬಂದು ಎಲ್ಲದರಲ್ಲೂ ಹಕ್ಕುದಾರಳಾಗಬೇಕು ಎಂದು ಎಂಆರ್‌ಪಿಎಲ್ ಅಧಿಕಾರಿ ಚೇಳ್ಯಾರುಗುತ್ತು ವೀಣಾ ಆರ್. ಶೆಟ್ಟಿ ಹೇಳಿದರು.
ಪ್ರಾಚೀನ ಭಾರತ ಧರ್ಮಾಡಳಿತ ಪುನರುತ್ಥಾನ ಕೂಟ (ಗುತ್ತು-ಬೀಡು-ಬಾವ-ಬಾರಿಕೆ-ಪರಡಿ ಮತ್ತು ಮಾಗಂದಡಿಗಳ ಸಂಗಮ)ಇದರ ಆಶ್ರಯದಲ್ಲಿ ಗುರುಪುರ ಗೋಳಿದಡಿಗುತ್ತಿನಲ್ಲಿ ‘ಶಕ್ತ್ಯೋಪಾಸನೆ ಮತ್ತು ಸ್ತ್ರೀ ಸಮಾಜ’ ಕುರಿತು ಗುರುವಾರ ನಡೆದ ಚಿಂತನ-ಮಂಥನ ವಾಕ್ಯಗೋಷ್ಠಿಯಲ್ಲಿ ‘ಪ್ರಕೃತಿಯಲ್ಲಿ ಸಕಲ ಫಲಾಪೇಕ್ಷಿಯಾಗಿ ಹೆಣ್ಣು’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.
‘ಮಂತ್ರ ಉಪಾಸನೆ ಮತ್ತು ಹೆಣ್ಣು’ ವಿಷಯದಲ್ಲಿ ಮಾತನಾಡಿದ ಆಶಾ ಜಗದೀಶ ಸ್ತ್ರೀಯೊಬ್ಬಳು ಮಂತ್ರೋಚ್ಛಾರ, ಪೂಜೆ ಮಾಡಬಾರದೆಂಬುದಿಲ್ಲ. ಹಿಂದಿನ ಕಾಲದಲ್ಲಿ ಪುರುಷರಿಗೆ ಸಮಾನವಾಗಿ ಪೂಜಾ ಕಾರ್ಯಕ್ರಮಗಳಲ್ಲಿ ಸ್ತ್ರೀ ಸಕ್ರಿಯವಾಗಿ ಭಾಗಿಯಾಗುತ್ತಿದ್ದಳು. ಅದಕ್ಕೆ ವೇದದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಆದರೆ ಅದಕ್ಕೊಂದು ವಯೋಮಿತಿ ಎಂಬುದಿದೆ. ಮಂತ್ರಗಳನ್ನು ತಪ್ಪಾಗಿ ಪಠಿಸಿದರೆ ಮಂತ್ರದ ಫಲ ಸಿಗುವುದಿಲ್ಲ. ಮಂತ್ರೋಚ್ಛಾರದಿಂದ ಸ್ಮರಣಶಕ್ತಿ ಹೆಚ್ಚುತ್ತದೆ. ಹಾಗಾಗಿ ಹೆಣ್ಣು ಮಂತ್ರೋಚ್ಛಾರ ಮಾಡಬಹುದು ಎಂದರು.
‘ಅಗ್ನಿ ಮತ್ತು ಹೆಣ್ಣು’ ವಿಷಯದಲ್ಲಿ ಮಾತನಾಡಿದ ಆಸರೆ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಡಾ. ಆಶಾ ಜ್ಯೋತಿ ರೈ ಅಗ್ನಿ ಎಂದರೆ ದೇವರು, ಪಂಚಭೂತಗಳಿಂದ ಮಾನವನ ಸೃಷ್ಟಿಯಾಗಿದೆ ಎಂಬ ನಂಬಿಕೆ ಇದೆ. ಹಾಗಾಗಿ ದೈನಂದಿನ ಕಾರ್ಯಗಳಲ್ಲಿ ಅಗ್ನಿ ಸಾಕ್ಷ್ಯಿಯಾಗಿದೆ. ಆತ್ಮದೊಳಗೂ ಅಗ್ನಿ ಇದೆ. ಅಗ್ನಿ ಸ್ತ್ರೀ ಸಖಿ. ಹೆಣ್ಣಿನಲ್ಲಿ ಮುಖ್ಯವಾಗಿ ‘ಪಂಚಾಗ್ನಿ ಧಾರಣಾ ಶಕ್ತಿ’(ಆಕಾಶ, ಮೋಡ, ಪೃಥ್ವೀ, ಪುರುಷ ಮತ್ತು ಸ್ತ್ರೀ) ಕಾಣಬಹುದು. ಇಲ್ಲಿ ಬರುವ ‘ಸ್ತ್ರೀ’ ಸಾಕ್ಷಾತ್ ಅಗ್ನಿಯಾಗಿದೆ. ಈ ಮೂಲಕ ಹೆಣ್ಣಿಗೆ ಪ್ರಕೃತಿಯೇ ವಿಶೇಷ ಜವಾಬ್ದಾರಿ ನೀಡಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಹೆಣ್ಣು ತನ್ನ ಮೂಲಗುಣಗಳಿಗೆ ತಕ್ಕುದಾಗಿ ನಡೆದುಕೊಳ್ಳಬೇಕು. ಮಹಿಳೆಗೆ ಮಹಿಳೆಯೇ ಬೆಂಗಾವಲಾದಾಗ ಮಾತ್ರ ಇದು ಸಾಧ್ಯ ಎಂದರು.
ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ವಾಕ್ಯಗೋಷ್ಠಿಯ ಸಮನ್ವಯಕಾರರಾಗಿದ್ದರು. ಸುನೀಲಾ ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







