ಗುಂಪು ಥಳಿತ, ಬೈಬಲ್ ಕುರಿತ ಹೇಳಿಕೆ: ಮೋಹನ್ ಭಾಗವತ್ ವಿರುದ್ಧ ಹರಿಹಾಯ್ದ ರಾಷ್ಟ್ರೀಯ ಚರ್ಚ್ ಮಂಡಳಿ

ಹೊಸದಿಲ್ಲಿ,ಅ.11: ಗುಂಪು ಥಳಿತ ಎಂಬ ಶಬ್ಧ ಪಾಶ್ಚಾತ್ಯ ದೇಶಗಳಿಂದ ಬಂದಿದೆ. ಬೈಬಲ್‌ನಲ್ಲಿ ದಾಖಲಾದಂತೆ, ನೀವು ಯಾರೂ ಯಾವುದೇ ಪಾಪ ಮಾಡಿಲ್ಲವಾಗಿದ್ದರೆ ಮಾತ್ರ ಮಹಿಳೆಯನ್ನು ಕಲ್ಲಿನಿಂದ ಹೊಡೆಯಿರಿ ಎಂದು ಏಸುಕ್ರಿಸ್ತ ಜನರಿಗೆ ತಿಳಿಸಿದ್ದರು ಎಂದು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ನೀಡಿದ್ದ ಹೇಳಿಕೆಯನ್ನು ಭಾರತದ ಚರ್ಚ್‌ಗಳ ರಾಷ್ಟ್ರೀಯ ಮಂಡಳಿ (ಎನ್‌ಸಿಸಿಐ) ಖಂಡಿಸಿದೆ.
ವಿಜಯದಶಮಿಯ ಪ್ರಯುಕ್ತ ನಾಗ್ಪುರದಲ್ಲಿ ನಡೆದ ಸಂಘಪರಿವಾರದ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದರು.
ಹೇಳಿಕೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಎನ್‌ಸಿಸಿಐ, ಸಮಾಜವನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸುವ ಸಾಮರ್ಥ್ಯ ಹೊಂದಿರುವ ಇಂತಹ ಹೇಳಿಕೆಯನ್ನು ಸಾರ್ವಜನಿಕ ಸ್ಥಳದಲ್ಲಿ ನೀಡಿರುವುದು ಆಘಾತ ನೀಡಿದೆ. ಇಂತಹ ತಪ್ಪು ವ್ಯಾಖ್ಯಾನದಿಂದ ಜನರಲ್ಲಿ ಸಂಶಯವನ್ನು ಸೃಷ್ಟಿಸಿದೆ ಮತ್ತು ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯವನ್ನು ಅವಮಾನಿಸಿದೆ. ಇಂತಹ ತಪ್ಪು ಮಾಹಿತಿಯನ್ನು ಜನರು ನಂಬಬಾರದು ಎಂದು ನಾವು ಮನವಿ ಮಾಡುತ್ತೇವೆ ಎಂದು ತಿಳಿಸಿದೆ.
ಬೈಬಲ್‌ನಿಂದ ಸಂಘಪರಿವಾರದ ಮುಖ್ಯಸ್ಥ ಉಲ್ಲೇಖಿಸಿರುವ ಘಟನೆ, ಯಾವ ರೀತಿ ಏಸು, ಪಿತೃಪ್ರಧಾನ ಸಮಾಜದ ಸಂತ್ರಸ್ತೆಯಾಗಿದ್ದ ಮಹಿಳೆಯ ಬೆಂಬಲಕ್ಕೆ ನಿಂತಿದ್ದರು ಎನ್ನುವುದನ್ನು ತೋರಿಸುತ್ತದೆ. ಭಾರತದಲ್ಲಿ ನಡೆಯುವ ಗುಂಪು ಥಳಿತ ಘಟನೆಗಳಲ್ಲಿ ಸೂಕ್ಷ್ಮ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನೇ ಗುರಿ ಮಾಡಲಾಗುತ್ತದೆ ಎಂದು ಎನ್‌ಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.







