ರಾಷ್ಟ್ರೀಯ ವಿಪತ್ತು ಘೋಷಣೆಗೆ ಸದನದಲ್ಲಿ ನಿರ್ಣಯ ಕೈಗೊಳ್ಳಿ: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಅ.11: ರಾಜ್ಯದಲ್ಲಿ ಈ ಹಿಂದೆ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ರೀತಿಯಲ್ಲಿ ಪ್ರಳಯ ಎಂದರೂ ತಪ್ಪಾಗಲಾರದು. ಇಂತಹ ಪರಿಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ ಸದನದಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ನೆರೆ ಪರಿಸ್ಥಿತಿ ಕುರಿತು ನಡೆದ ಚರ್ಚೆ ವೇಳೆ ಸರಕಾರ ಉತ್ತರ ನೀಡಿದ ಬಳಿಕ ಮಾತನಾಡಿದ ಅವರು, ಈ ಸದನದಲ್ಲಿ ರಾಷ್ಟ್ರೀಯ ವಿಪತ್ತು ಕುರಿತು ನಿರ್ಣಯ ಕೈಗೊಳ್ಳುವುದು ಉತ್ತಮ. ಸರಕಾರದ ವತಿಯಿಂದಲೇ ನಿರ್ಣಯ ಮಂಡಿಸಲಿ ನಾವು ಅನುಮೋದಿಸುತ್ತೇವೆ. ಇಲ್ಲವೇ ನಾವು ಮಂಡಿಸುತ್ತೇವೆ ನೀವು ಅನುಮೋದಿಸಿ ಎಂದರು.
ಈ ವೇಳೆ ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್ ರಾಜ್ಯದ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸದನದಲ್ಲಿ ನಿರ್ಣಯವನ್ನು ಮಂಡಿಸಿದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಖಾಸಗಿ ನಿರ್ಣಯ ಮಂಡನೆ ಮಾಡಲು ನಿಯಮಾವಳಿಗಳಲ್ಲಿ ಇವತ್ತು ಅವಕಾಶವಿಲ್ಲ ಎಂದರು.
ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ನೆರೆ ಪರಿಸ್ಥಿತಿ ಕುರಿತು ಸರಕಾರ ನೀಡಿದ ಉತ್ತರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭಾ ತ್ಯಾಗ ನಡೆಸಿ ಹೊರ ನಡೆದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ನಾಳೆ ಬೆಳಗ್ಗೆಗೆ ಮುಂದೂಡಿದರು.







