‘ಬೆಂಗಳೂರು ಉತ್ಸವ’ಕ್ಕೆ ಚಾಲನೆ: ಗಮನ ಸೆಳೆದ ವಿಭಿನ್ನ ಸಾಮಗ್ರಿಗಳು

ಬೆಂಗಳೂರು, ಅ.11: ದೀಪಾವಳಿ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸೀರೆ, ಆಲಂಕಾರಿಕ ವಸ್ತುಗಳು ಹಾಗೂ ಕಣ್ಮನ ಸೆಳೆಯುವ ಸಾಮಗ್ರಿಗಳ ‘ಬೆಂಗಳೂರು ಉತ್ಸವ’ಕ್ಕೆ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಚಾಲನೆ ನೀಡಲಾಯಿತು.
ಬೆಂಗಳೂರು ಉತ್ಸವಕ್ಕೆ ಚಾಲನೆ ನೀಡಿದ ನಟಿಯರಾದ ಸವಿತಾ ದೇವರಾಜ ರೆಡ್ಡಿ, ಸ್ಪೂರ್ತಿ ವಿಶ್ವಾಸ್, ಮೋನಿಕಾ ರಾಜ್ ದೀಪಗಳು ಹಾಗೂ ಹಬ್ಬಕ್ಕೆ ವಿಶೇಷವಾಗಿ ಪ್ರದರ್ಶನಕ್ಕೆ ಇಟ್ಟಿರುವ ಸಾಮಗ್ರಿಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು. ನಟಿ ಸವಿತಾ ದೇವರಾಜ್ ರೆಡ್ಡಿ ಮಾತನಾಡಿ, ದೇಶದ ಎಲ್ಲಾ ಭಾಗಗಳಿಂದಲೂ ಆಗಮಿಸಿರುವ ಕರಕುಶಲಕಾರರು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿರುವ ದೀಪಗಳ ಕಲೆಕ್ಷನ್ ಮನಸೂರೆಗೊಳ್ಳುವಂತೆ ಇದೆ. ಇಲ್ಲಿರುವ ವಿಭಿನ್ನ ಸಾಮಗ್ರಿಗಳನ್ನು ನಾನು ಇದುವರೆಗೂ ನೋಡಿರಲಿಲ್ಲ ಎಂದರು.
ನಟಿ ಸ್ಪೂರ್ತಿ ಮಾತನಾಡಿ, ದೀಪಗಳ ಹಬ್ಬ ದೀಪಾವಳಿ. ದೇಶದ ಎಲ್ಲಾ ಭಾಗಗಳಲ್ಲೂ ಆಚರಿಸಲ್ಪಡುವ ಈ ಹಬ್ಬಕ್ಕೆ ಭಾರತೀಯರ ಜೀವನದಲ್ಲಿ ಬಹಳ ಮಹತ್ವಪೂರ್ಣವಾದ ಸ್ಥಾನವಿದೆ. ಅದರಲ್ಲೂ ಅಂಧಕಾರವನ್ನು ಹೋಗಲಾಡಿಸುವ ದೀಪಗಳಿಗೆ ಅವುಗಳದೇ ಆದ ವೈಶಿಷ್ಟ್ಯತೆ ಇದೆ ಎಂದು ಹೇಳಿದರು.
ಆಯೋಜಕ ಅಫ್ತಾಬ್ ಮಾತನಾಡಿ, ಈ ಬಾರಿಯ ಉತ್ಸವದಲ್ಲಿ ದೀಪಗಳ ಪ್ರಮುಖ ಆಕರ್ಷಣೆಯಾಗಿರಲಿವೆ. ವೈವಿಧ್ಯಮಯ ಮಣ್ಣಿನ ದೀಪ, ಲೋಹದ ದೀಪ, ತರಹೇವಾರಿ ಲೈಟಿಂಗ್ ಆಯ್ಕೆಗಳ ಶ್ರೇಣಿ ಇಲ್ಲಿರಲಿದೆ. ದೇಶದ ಎಲ್ಲಾ ಭಾಗಗಳಿಂದ ಆಗಮಿಸಿದ ಕರಕುಶಲಕಾರರು ತಯಾರಿಸಿದ ವಿಭಿನ್ನ ರೀತಿಯ ದೀಪಗಳ ಪ್ರದರ್ಶನ ಇಲ್ಲಿರಲಿದೆ ಎಂದು ಹೇಳಿದರು. ಈ ಪ್ರದರ್ಶನ ಹಾಗೂ ಮಾರಾಟ ಮೇಳದ ಪ್ರಮುಖ ಆಕರ್ಷಣೆ ತರಹೇವಾರಿ ದೀಪಗಳು. ಈ ಬಾರಿ ಒಂದೇ ವೇದಿಕೆಯ ಅಡಿಯಲ್ಲಿ ಎಲ್ಲಾ ರೀತಿಯ ಹಾಗೂ ವಿಭಿನ್ನ ದೀಪಗಳನ್ನು ಖರೀದಿಸಬಹುದಾಗಿದೆ. ಇದರ ಜೊತೆಯಲ್ಲಿಯೇ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಾಮಗ್ರಿಗಳನ್ನು ಇಲ್ಲಿ ಕೊಳ್ಳಬಹುದಾಗಿದೆ ಎಂದು ಹೇಳಿದರು. ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿರಲಿವೆ ಎಂದರು.







