ಕೇಂದ್ರ, ರಾಜ್ಯ ಸರಕಾರಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಬಂಟ್ವಾಳದಿಂದ ಬೆಂಗಳೂರಿಗೆ ವಾಹನ ಜಾಥಾಕ್ಕೆ ಚಾಲನೆ

ಬಂಟ್ವಾಳ, ಅ. 11: ಪ್ರವಾಹ ಪೀಡಿತ, ಅಕಾಲಿಕ ಮಳೆ, ಬರ ನಿರ್ವಹಣೆಗೆ ನೆರವು ನೀಡಲು ಕೇಂದ್ರ, ರಾಜ್ಯ ಸರಕಾರಗಳ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬಂಟ್ವಾಳದಿಂದ ಬೆಂಗಳೂರಿಗೆ ವಾಹನ ಜಾಥಾಕ್ಕೆ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಶುಕ್ರವಾರ ಚಾಲನೆ ನೀಡಿದರು.
ಬಂಟ್ವಾಳ ಮಿನಿವಿಧಾನಸೌಧ ಮುಂಭಾಗದಿಂದ ಹೊರಟ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಸಂಕಷ್ಟದಲ್ಲಿಂದು ಅಡಕೆ ಬೆಳೆಗಾರರ ಸಹಿತ ಎಲ್ಲ ಕೃಷಿಕರಿದ್ದು, ಬಹುತೇಕರು ಪ್ರವಾಹಪೀಡಿತರಾಗಿದ್ದಾರೆ. ಸರಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಗಮನ ಸೆಳೆಯಲು ಜಾಥಾ ಸಂಘಟಿಸಲಾಗಿದೆ ಎಂದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಕೇಂದ್ರ ಸರಕಾರವು ರಾಜ್ಯಕ್ಕೆ ನೆರವು ನೀಡದೆ ರೈತವಿರೋಧಿ ನೀತಿ ಅನುಸರಿಸುತ್ತಿದೆ. ಅರ್ಧ ದಿನವೂ ರೈತರೊಂದಿಗೆ ಕಳೆಯಲು ಪ್ರಧಾನಿ ಮುಂದಾಗಲಿಲ್ಲ. ಬರ ಮತ್ತು ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಎನ್‍ಡಿಆರ್‍ಎಫ್ ಪರಿಹಾರ ನೀಡುವ ಮಾರ್ಗದರ್ಶಿ ನೀತಿ ಬದಲಿಸಿ, ವೈಜ್ಞಾನಿಕವಾಗಿ ಸಂಪೂರ್ಣ ನಷ್ಟ ಪರಿಹಾರ ತುಂಬಿಕೊಡುವ ರಾಷ್ಟ್ರೀಯ ಪುನರ್ವಸತಿ ನೀತಿ ಜಾರಿಗೆ ತರಬೇಕು. ಅಡಿಕೆ ಅಭಿವೃದ್ಧಿ ಮಂಡಳ ಸ್ಥಾಪಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ, ಅಡಕೆ, ತೆಂಗು, ಭತ್ತದ ಬೆಳೆಗಾರರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಅ. 12ರಂದು ತಲಕಾವೇರಿಯಿಂದ ಜಾಥಾ ಬೆಂಗಳೂರಿಗೆ ತಲುಪಲಿದೆ. ಅ. 14ರಂದು ಮಧ್ಯಾಹ್ನ 1ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂತ್ರಸ್ತರ ಬಹಿರಂಗ ಅಧಿವೇಶನ ನಡೆಯಲಿದ್ದು, ದ.ಕ. ಜಿಲ್ಲೆಯಿಂದ 200ಕ್ಕೂ ಅಧಿಕ ರೈತರು ಭಾಗವಹಿಸುವರು ಎಂದು ಅವರು ಹೇಳಿದರು.
ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ಅಲ್ವಿನ್ ಮಿನೇಜಸ್, ತಾಲೂಕು ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಕಾರ್ಯದರ್ಶಿ ಓಸ್ವಾಲ್ಡ್ ಫೆರ್ನಾಂಡೀಸ್, ಪ್ರಮುಖರಾದ ರೂಪಾಸ್ ವಿನಯ್ ಪಿಂಟೊ, ಶಾಹುಲ್ ಹಮೀದ್ ಕನ್ಯಾನ, ಹೇಮಲತಾ ಭಟ್, ಐವನ್ ಮಿನೇಜಸ್, ರಾಮಣ್ಣ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.







