ಜಿಎಸ್ಟಿ ದೇಶದ ಕಾನೂನು, ತಿರಸ್ಕರಿಸುವಂತಿಲ್ಲ: ನಿರ್ಮಲಾ
ಪುಣೆ,ಅ.11: ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಕಾಯ್ದೆಗೆ ಸಂಸತ್ತು ಮತ್ತು ಎಲ್ಲ ರಾಜ್ಯ ವಿಧಾನಸಭೆಗಳು ಒಪ್ಪಿಗೆ ನೀಡಿರುವುದರಿಂದ ಅದನ್ನು ಈಗ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಇಲ್ಲಿ ಹೇಳಿದರು. ಉದ್ಯಮಿಗಳು ಮತ್ತು ಚಾರ್ಟ್ರೆಡ್ ಅಕೌಂಟಂಟ್ಗಳೊಂದಿಗೆ ಮಾತುಕತೆ ನಡೆಸುತ್ತಿದ್ದ ಅವರು ಒಂದು ಹಂತದಲ್ಲಿ ಜಿಎಸ್ಟಿ ವ್ಯವಸ್ಥೆಯನ್ನು ಟೀಕಿಸಿದ ನಿಯೋಗದಲ್ಲಿಯ ಸದಸ್ಯನೋರ್ವನಿಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದರು.
ಜಿಎಸ್ಟಿ ಬಗ್ಗೆ ದೂರುಗಳನ್ನು ಹೊಂದಿರುವವರು ನೀಡಿದ ಸಲಹೆಗಳನ್ನು ಸರಕಾರವು ಕೆಲವೊಮ್ಮೆ ಪರಿಗಣಿಸಿಲ್ಲ. ಇವುಗಳನ್ನು ಪರಿಗಣಿಸಿದರೆ ಕಾನೂನಿಗೆ ಯಾವುದೇ ಬದಲಾವಣೆಯನ್ನು ತರದೆ ಜಿಎಸ್ಟಿಯ ಹೊರೆ ಬಹಳಷ್ಟು ತಗ್ಗುತ್ತದೆ ಎಂದು ಸದಸ್ಯ ಹೇಳುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಸೀತಾರಾಮನ್, ನೀವು ಬೇಕಾದರೆ 50 ಜನರೊಂದಿಗೆ ಬನ್ನ್ನಿ,ಐದೋ ಐವತ್ತೋ ಸಲಹೆಗಳನ್ನು ತನ್ನ್ನಿ. ಈ ದೇಶದಲ್ಲಿ ಸುದೀರ್ಘ ಕಾಲದ ಬಳಿಕ ಹಲವಾರು ರಾಜಕೀಯ ಪಕ್ಷಗಳಿರುವ ಸಂಸತ್ತ್ತು ಮತ್ತು ವಿಧಾನಸಭೆಗಳ ಅಂಗೀಕಾರದಿಂದ ಕಾನೂನನ್ನು ತರಲಾಗಿದೆ.ಆದರೆ ಈಗ ದಿಢೀರಾಗಿ ಇದೇನು ಅವ್ಯವಸ್ಥೆ ಎನ್ನುವಂತಿಲ್ಲ ಎಂದರು.