17 ಗಂಟೆ 58 ನಿಮಿಷ ವಿಧಾನಸಭೆ ಕಲಾಪ ನಡೆದಿದೆ: ಸ್ಪೀಕರ್ ಕಾಗೇರಿ
ಬೆಂಗಳೂರು, ಅ.12: 15ನೇ ವಿಧಾನಸಭೆಯ 5ನೇ ಅಧಿವೇಶನವು ಅ.10 ರಿಂದ 12ರವರೆಗೆ ಮೂರು ದಿನ ನಡೆದಿದ್ದು, ಒಟ್ಟು 17 ಗಂಟೆ 58 ನಿಮಿಷಗಳ ಕಾಲ ಕಾರ್ಯಕಲಾಪಗಳನ್ನು ನಡೆಸಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಶನಿವಾರ ವಿಧಾನಸಭೆಯಲ್ಲಿ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿಯನ್ನು ಓದಿದ ಅವರು, ರಾಜ್ಯದಲ್ಲಿನ ಅನೇಕ ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಅನಾಹುತ ಕುರಿತು ನೀಡಲಾದ ನಿಯಮ 60ರ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, ಈ ಚರ್ಚೆಯಲ್ಲಿ 22 ಸದಸ್ಯರು ಪಾಲ್ಗೊಂಡು 11 ಗಂಟೆ 16 ನಿಮಿಷ ಚರ್ಚೆ ನಡೆಸಿದ್ದಾರೆ ಎಂದರು.
ಇತ್ತೀಚೆಗೆ ನಿಧನ ಹೊಂದಿದ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಮ್ ಜೇಠ್ಮಲಾನಿ ಹಾಗೂ ಮಾಜಿ ಶಾಸಕರಾದ ಉಮೇಶ್ ಭಟ್, ಸಿ.ವೀರಭದ್ರಯ್ಯ, ಅರ್ಜುನ್‌ರಾವ್ ಲಕ್ಷ್ಮಣರಾವ್ ಹಿಶೋಬಕರ್ ಮತ್ತು ವಿಧಾನಪರಿಷತ್ತಿನ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು.
ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿ, ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಕಾರ್ಯದರ್ಶಿ ಮಂಡಿಸಿದ್ದಾರೆ. ಭಾರತದ ಲೆಕ್ಕನಿಯಂತ್ರಕರು ಮತ್ತು ಲೆಕ್ಕಪರಿಶೋಧಕರು ನೀಡಿರುವ 2017-18ನೇ ಸಾಲಿನ ಧನ ವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು(ಸಂಪುಟ 1 ಮತ್ತು 2) ಮಾರ್ಚ್ 2018ಕ್ಕೆ ಕೊನೆಗೊಂಡ ವರ್ಷಕ್ಕೆ ನೀಡಿರುವ ರಾಜಸ್ವ ವಲಯದ ಮೇಲಿನ ವರದಿ(2019ನೇ ವರ್ಷದ ವರದಿ ಸಂಖ್ಯೆ 1) ಮಂಡಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.
ಆರ್ಥಿಕ ವಲಯದ ಮೇಲಿನ ವರದಿ(2019ನೇ ವರ್ಷದ ವರದಿ ಸಂಖ್ಯೆ 3), ರಾಜ್ಯ ಸರಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿ(2019ರ ವರದಿ ಸಂಖ್ಯೆ 2), ಸಾಮಾನ್ಯ ಮತ್ತು ಸಾಮಾಜಿಕ ವಲಯದ ಮೇಲಿನ ವರದಿ(2019ನೇ ವರ್ಷದ ವರದಿ ಸಂಖ್ಯೆ 4), ಪಂಚಾಯತ್ ರಾಜ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೇಲಿನ ವಾರ್ಷಿಕ ತಾಂತ್ರಿಕ ಪರಿಶೀಲನಾ ವರದಿಯನ್ನು ಮಂಡಿಸಲಾಗಿದೆ ಎಂದು ಅವರು ಹೇಳಿದರು.
ಈ ಅಧಿವೇಶನದಲ್ಲಿ ರಾಜ್ಯ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ 28ನೇ ವರದಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2ನೇ ವರದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ 35ನೇ ವರದಿ ಮತ್ತು ಅಧೀನ ಶಾಸನ ರಚನಾ ಸಮಿತಿಯ 47ನೇ ವರದಿ ಸೇರಿದಂತೆ ಒಟ್ಟು 4 ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.
ಈ ಅಧಿವೇಶನದಲ್ಲಿ ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ 1ನೇ ಪಟ್ಟಿಯಿಂದ 21 ಅಧಿಸೂಚನೆಗಳು, 1 ಆಧ್ಯಾದೇಶ, 2ನೇ ಪಟ್ಟಿಯಲ್ಲಿ 100 ವಾರ್ಷಿಕ ವರದಿಗಳು, 112 ಲೆಕ್ಕ ಪರಿಶೋಧನಾ ವರದಿಗಳು, 2 ವಿಶೇಷ ವರದಿಗಳು, 1 ಆಯವ್ಯಯ ಪಟ್ಟಿ ಮತ್ತು 1 ಪರಿಷ್ಕೃತ ಆಯವ್ಯಯ ಪಟ್ಟಿಯನ್ನು, 3ನೇ ಪಟ್ಟಿಯಲ್ಲಿ 1 ಅಧಿಸೂಚನೆಯನ್ನು, 4ನೇ ಪಟ್ಟಿಯಲ್ಲಿ 4 ವಾರ್ಷಿಕ ವರದಿಗಳು ಹಾಗೂ 1 ವಿಶೇಷ ವರದಿಯನ್ನು ಮಂಡಿಸಲಾಗಿದೆ ಎಂದು ಅವರು ಹೇಳಿದರು.
2019-20ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಅ.11ರಂದು, 2019-20ನೇ ಸಾಲಿನ ಅನುದಾನ ಬೇಡಿಕೆಗಳನ್ನು ಮುಖ್ಯಮಂತ್ರಿ ಅ.10ರಂದು ಮಂಡಿಸಿದ್ದು, ಅ.12ರಂದು ಮತಕ್ಕೆ ಹಾಕಿ ಅಂಗೀಕರಿಸಲಾಯಿತು. ಅ.12ರಂದು ಧನ ವಿನಿಯೋಗ ವಿಧೇಯಕಗಳು ಸೇರಿ ಒಟ್ಟು 3 ವಿಧೇಯಕಗಳನ್ನು ಮಂಡಿಸಲಾಗಿದ್ದು, ಅವುಗಳನ್ನು ಪರ್ಯಾಲೋಚಿಸಿ, ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ ವಿವಿಧ ಜಲಾಶಯ ಮತ್ತು ನಾಲಾ ಯೋಜನೆಗಳ ಕಾಮಗಾರಿಗಳಿಗೆ ಸಂಬಂಧಿಸಿದ ಕ್ರಿಯಾ ಯೋಜನೆಗಳ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದಲ್ಲದೇ, ಕುಡಿಯುವ ನೀರು ಒದಗಿಸಲು ಹಾಗೂ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳುವ ಬಗ್ಗೆ ನೀಡಲಾದ ನಿಯಮ 60ರ ಸೂಚನೆಯನ್ನು 69ಕ್ಕೆ ಪರಿವರ್ತಿಸಲಾಗಿದ್ದು, ಈ ಚರ್ಚೆಯಲ್ಲಿ 7 ಸದಸ್ಯರು ಪಾಲ್ಗೊಂಡು 6 ನಿಮಿಷ ಚರ್ಚೆ ನಡೆಸಿದ್ದಾರೆ ಎಂದು ಅವರು ಹೇಳಿದರು.