ಸಿಸ್ಟರ್ ಮರಿಯಂ ತ್ರೇಸಿಯಾಗೆ ಸಂತ ಪದವಿ: ಕೇಂದ್ರ ಸಚಿವ ಮುರಳೀಧರನ್ ಗೆ ಭಾರತೀಯ ನಿಯೋಗದ ನೇತೃತ್ವ
ವಿ. ಮುರಳೀಧರನ್
ಹೊಸದಿಲ್ಲಿ, ಅ.12: ಸಿಸ್ಟರ್ ಮರಿಯಂ ತ್ರೇಸಿಯಾ ಅವರಿಗೆ ಸಂತ ಪದವಿ ಘೋಷಣೆಯ ಸಮಾರಂಭ ವ್ಯಾಟಿಕನ್ ನಗರದಲ್ಲಿ ರವಿವಾರ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಭಾರತದ ನಿಯೋಗದ ನೇತೃತ್ವವನ್ನು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳೀಧರನ್ ಅವರಿಗೆ ನೀಡಲಾಗಿದೆ.
ಅ.12-13ರಂದು ನಡೆಯಲಿರುವ ಎರಡು ದಿನಗಳ ಸಮಾರಂಭದಲ್ಲಿ ಭಾಗವಹಿಸಲು ಮುರಳೀಧರನ್ ವ್ಯಾಟಿಕನ್ ನಗರದಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪೋಪ್ ಫ್ರಾನ್ಸಿಸ್ ಅವರು ಸಿಸ್ಟರ್ ಮರಿಯಂ ತ್ರೇಸಿಯಾಗೆ ಸಂತ ಪದವಿ ನೀಡಲಿದ್ದಾರೆ. 1876ರ ಎಪ್ರಿಲ್ 26ರಂದು ಕೇರಳದ ತ್ರಿಶೂರಿನಲ್ಲಿ ಜನಿಸಿದ್ದ ಸಿಸ್ಟರ್ ಮರಿಯಂ ತ್ರೇಸಿಯಾ 1914ರಲ್ಲಿ ತ್ರಿಶೂರಿನಲ್ಲಿ ಸಿಸ್ಟರ್ಸ್ ಆಫ್ ಹೋಲಿ ಫ್ಯಾಮಿಲಿ ಪ್ರಾರ್ಥನಾ ಸಭೆಯನ್ನು ಆರಂಭಿಸಿದ್ದರು. 1926ರ ಜೂನ್ 8ರಂದು ಅವರು ನಿಧನರಾಗಿದ್ದರು. ಎಪ್ರಿಲ್ 9, 2000ದಲ್ಲಿ ಪೋಪ್ ಜಾನ್ ಪೌಲ್ ಸಿಸ್ಟರ್ ತ್ರೇಸಿಯಾರನ್ನು ಪವಿತ್ರ ಎಂದು ಘೋಷಿಸಿದ್ದರು.
ಪ್ರಧಾನಿ ಮೋದಿ ಕಳೆದ ತಿಂಗಳು ತನ್ನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಿಸ್ಟರ್ ತ್ರೇಸಿಯಾ ಅವರ ಬಗ್ಗೆ ಉಲ್ಲೇಖಿಸಿದ್ದರು. ಅಕ್ಟೋಬರ್ 13ರಂದು ಪೋಪ್ ಫ್ರಾನ್ಸಿಸ್ ಅವರು ಸಿಸ್ಟರ್ ತ್ರೇಸಿಯಾ ಅವರನ್ನು ಸಂತ ಎಂದು ಘೋಷಿಸಲಿದ್ದಾರೆ ಮತ್ತು ಇದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ತಿಳಿಸಿದ್ದರು.