ಮೌಖಿಕ ಇತಿಹಾಸದ ದಾಖಲೀಕರಣದಿಂದ ಸತ್ಯಾನ್ವೇಷಣೆ: ಪ್ರೊ. ತುಕರಾಮ್ ಪೂಜಾರಿ
ಸಂಚಯಗಿರಿ: ಮೌಖಿಕ ಇತಿಹಾಸ ದಾಖಲೀಕರಣ ಕಾರ್ಯಾಗಾರ

ಬಂಟ್ವಾಳ, ಅ. 12: ಇತಿಹಾಸ ಎಂಬುದು ಅರ್ಧ ಸತ್ಯ. ಇದರಲ್ಲಿ ಸತ್ಯದ ಹುಡುಕಾಟ ನಡೆಯಬೇಕು. ಮೌಖಿಕ ಇತಿಹಾಸದ ದಾಖಲೀಕರಣ ಸಂದರ್ಭ ಸತ್ಯಾನ್ವೇಷಣೆಯೂ ನಡೆಯುತ್ತದೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕರಾಮ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಶನಿವಾರ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯದ ಸಹಯೋಗದೊಂದಿಗೆ ಆಯೋಜಿಸಲ್ಪಟ್ಟ ಮೌಖಿಕ ಇತಿಹಾಸ ದಾಖಲೀಕರಣ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಿಂಬಿಸುವ ಮೌಖಿಕ ಇತಿಹಾಸವನ್ನು ಉಳಿಸುವ ನಿಟ್ಟಿನಲ್ಲಿ ಅದರ ದಾಖಲೀಕರಣ ಅತಿ ಅಗತ್ಯವಾಗಿದ್ದು, ಶಾಸ್ತ್ರೀಯ ಇತಿಹಾಸದ ಬರವಣಿಗೆಯ ಸಂದರ್ಭದ ಮಾಹಿತಿಗೂ ಮೌಖಿಕ ಇತಿಹಾಸ ಪೂರಕವಾಗಲಿದೆ ಎಂದು ಹೇಳಿದರು.
ನಮ್ಮ ಇತಿಹಾಸದ ಕುರಿತು ನಾವು ತಳೆದಿರುವ ತಾತ್ಸಾರ ಭಾವನೆಯ ಪರಿಣಾಮದಿಂದಲೇ ಪ್ರಸ್ತುತ ಅದು ಅವಸಾನದ ಅಂಚಿಗೆ ಬಂದು ತಲುಪಿದ್ದು, ಒಂದು ಕಾರ್ಯಾಚಾರವನ್ನು ಆಯೋಜಿಸಿ ಪ್ರಾಧ್ಯಾಪಕರನ್ನು ಆಹ್ವಾನಿಸಿದರೆ ಬೆರಳೆಣಿಕೆಯ ಮಂದಿ ಮಾತ್ರ ಆಗಮಿಸುತ್ತಾರೆ. ಇಂತಹ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ಮೌಖಿಕ ಇತಿಹಾಸ ದಾಖಲೀಕರಣ ಕಾರ್ಯವನ್ನು ಯಶಸ್ಸುಗೊಳಿಸುತ್ತೇವೆ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಡೈಜಿವಲ್ಡ್ ವ್ಯವಸ್ಥಾಪಕ ಪ್ರವೀಣ್ ತಾವ್ರೋ ಮಾತನಾಡಿ, ಜನಸಾಮಾನ್ಯರ ಪರಿಕಲ್ಪನೆಯಡಿ ಇತಿಹಾಸ ದರ್ಶನ ನಡೆಸುವ ಕಾರ್ಯ ಶ್ಲಾಘನೀಯ. ಮೌಖಿಕ ಇತಿಹಾಸದ ಅಧ್ಯಯನ ಅನಿವಾರ್ಯವಾಗಿದ್ದು, ಇದನ್ನು ತಳ್ಳಿಹಾಕುವಂತಿಲ್ಲ ಎಂದರು.
ಮುಖ್ಯ ಅತಿಥಿ ಮಡಿಕೇರಿ ಭೂಮಾಪನ-ಅಳತೆ ವಿಭಾಗದ ಸಹಾಯಕ ಅಧಿಕಾರಿ ಗಜೇಂದ್ರ ಮಾತನಾಡಿ, ಅಪಾರ ಸಂಪತ್ತನ್ನು ಒಳಗೊಂಡಿರುವ ಕರಾವಳಿಯನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಸುವ ನಿಟ್ಟಿನಲ್ಲಿ ನಾವು ಬಹಳ ಹಿಂದಿದ್ದು, ಅದನ್ನು ಬೆಳೆಸಿದಾಗ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೂ ದೊಡ್ಡ ಕೊಡುಗೆಯನ್ನು ನೀಡುತ್ತದೆ. ಇಂತಹ ಕೇಂದ್ರಗಳು ಹೆಚ್ಚು ಪ್ರಚಾರ ಪಡೆದಾಗ ಜನರ ಆಸಕ್ತಿಯೂ ವೃದ್ಧಿಸುತ್ತದೆ ಎಂದರು.
ಕಾರ್ಯಕ್ರಮಕ್ಕೆ ಯುಎಇ ಕನ್ನಡ ಸಂಸ್ಕೃತಿ ರಾಯಭಾರಿ ಸರ್ವೋತ್ತಮ ಶೆಟ್ಟಿ ಭೇಟಿ ನೀಡಿದ್ದರು.
ವೇದಿಕೆಯಲ್ಲಿ ಉಡುಪಿ ಜಿಲ್ಲೆಯ ಇತಿಹಾಸ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಮರಿಯಾ ಜಸಿಂತಾ ಫುರ್ಟಾಡೋ, ದ.ಕ.ಜಿಲ್ಲಾ ಇತಿಹಾಸ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಪ್ರೊ. ಸಂತೋಷ್, ಕಾಸರಗೋಡು ಇತಿಹಾಸ ಉಪನ್ಯಾಸಕರ ಸಂಘ ಸಂಚಾಲಕ ಪ್ರೊ. ರಾಜೇಂದ್ರ ರೈ, ಪ್ರೊ. ಆಶಾಲತಾ ಸುವರ್ಣ ಉಪಸ್ಥಿತರಿದ್ದರು.
ಬಂಟ್ವಾಳ ಸರಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ವಿಲ್ರೆಡ್ ಪ್ರಕಾಶ್ ಡಿಸೋಜ ಸ್ವಾಗತಿಸಿದರು. ಉಪನ್ಯಾಸಕ ಪ್ರೊ. ಬಾಲಕೃಷ್ಣ ವಂದಿಸಿದರು. ಸಚೇತ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.
.jpg)







