ನ್ಯಾ.ನಾರಾಯಣಸ್ವಾಮಿ ರಾಜ್ಯದಲ್ಲಿಯೇ ಉಳಿಯಬೇಕಿತ್ತು: ಪ್ರೊ.ರವಿವರ್ಮ ಕುಮಾರ್
ಬೆಂಗಳೂರು, ಅ.12: ಕಳಂಕ ರಹಿತ ವ್ಯಕ್ತಿತ್ವ ಹೊಂದಿರುವ ನಾರಾಯಣಸ್ವಾಮಿ ಅಂತಹವರು ಕರ್ನಾಟಕದ ಆಸ್ತಿಯಾಗಿದ್ದು, ಅವರು ರಾಜ್ಯದಲ್ಲಿಯೇ ಉಳಿಯಬೇಕಿತ್ತು ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.
ಶನಿವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಪ್ರೊ.ಬಿ.ಕೃಷ್ಣಪ್ಪಟ್ರಸ್ಟ್, ಲಾಯರ್ಸ್ ಫೋರಂ ಸೋಶಿಯಲ್ ಜಸ್ಟೀಸ್ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಜಂಟಿಯಾಗಿ ಆಯೋಜಿಸಿದ್ದ ಹಿಮಾಚಲ ಪ್ರದೇಶ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ನೇಮಕರಾಗಿರುವ ಎಲ್.ನಾರಾಯಣಸ್ವಾಮಿಗೆ ಗೌರವಾಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾರಾಯಣಸ್ವಾಮಿಯವರು ಹಿಮಾಲಚ ಪ್ರದೇಶಕ್ಕೆ ನ್ಯಾಯಮೂರ್ತಿಯಾಗಿ ಹೋಗಿರುವುದು ಹೆಮ್ಮೆಯ ಸಂಗತಿ. ಕನ್ನಡಿಗರೊಬ್ಬರು ಇಷ್ಟು ಎತ್ತರಕ್ಕೆ ಬೆಳೆದಿರುವುದು ಶ್ಲಾಘನೀಯ. ಆದರೆ, ಅವರು ಇಲ್ಲಿಯೇ ಇದ್ದಿದ್ದರೆ ಮತ್ತಷ್ಟು ಅನುಕೂಲವಾಗುತ್ತಿತ್ತು. ಇದೀಗ ಅವರು ಹೋಗುತ್ತಿರುವುದು ಕರ್ನಾಟಕಕ್ಕೆ ನಷ್ಟವಾದಂತಾಗಿದೆ ಎಂದರು.
ಕರ್ನಾಟಕಕ್ಕೆ ನಾರಾಯಣಸ್ವಾಮಿಯ ಅವಶ್ಯkತೆ ಬಹಳಷ್ಟಿದೆ. ಆದರೆ, ಇದೀಗ ಅವರು ಹಿಮಾಚಲದ ನ್ಯಾಯಮೂರ್ತಿಯಾಗಿದ್ದು, ಹೆಚ್ಚಿನ ಲಾಭ ಅವರಿಗೆ ಸಿಗಲಿದೆ. ಇದೇ ರೀತಿಯಲ್ಲಿ ಹಂತ ಹಂತವಾಗಿ ಯಶಸ್ಸು ಕಾಣಲಿ ಎಂದ ಅವರು, ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿಯೂ ಕೆಲಸ ನಿರ್ವಹಿಸಲಿ ಎಂದು ರವಿವರ್ಮ ಕುಮಾರ್ ಆಶಿಸಿದರು.
ಒಂದೇ ಕಡೆ ಹಲವರು ಹತ್ತಾರು ವರ್ಷಗಳ ಕಾಲ ವಕೀಲರಾಗಿ, ನ್ಯಾಯಮೂರ್ತಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ನಡುವೆಯೂ ಮುಖ್ಯ ನ್ಯಾಯಮೂರ್ತಿಯಾಗಿ ಭಡ್ತಿ ಸಿಗುವುದು ಸುಲಭವಲ್ಲ. ಸಾಕಷ್ಟು ಮೆಟ್ಟಿಲುಗಳನ್ನು ಹತ್ತಿ ಬರಬೇಕು ಎಂದ ಅವರು, ನಾರಾಯಣಸ್ವಾಮಿಗೆ ಅವಕಾಶ ಸಿಕ್ಕಿದೆ ಎಂದು ನುಡಿದರು.
ಯಾವುದೇ ಆರೋಪ ಇಲ್ಲದೆ, ಪ್ರಾಮಾಣಿಕ ಮತ್ತು ಕಳಂಕ ರಹಿತವಾಗಿರುವ ನಾರಾಯಣಸ್ವಾಮಿ ಅವರನ್ನು, ಇಂದಿಗೂ ರಾಜ್ಯಾದ್ಯಂತ ಕಕ್ಷಿದಾರರು, ವಕೀಲರು ನೆನೆಯುತ್ತಾರೆ. ಗುಲ್ಬರ್ಗ, ಧಾರವಾಡ ಸೇರಿದಂತೆ 30 ಸಾವಿರಕ್ಕೂ ಅಧಿಕ ನನೆಗುದಿಗೆ ಬಿದ್ದಿದ್ದ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಕೆಲ ವಕೀಲರು, ಮಹಿಳೆಯರನ್ನು ಏಕ ವಚನದಲ್ಲೇ ನಿಂದನೆ ಮಾಡುವುದು ಉಂಟು. ಆದರೆ, ನಾರಾಯಣಸ್ವಾಮಿ ಹಾಗಲ್ಲ. ಸೌಜನ್ಯ ವ್ಯಕ್ತಿತ್ವ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ವ್ಯಾಪ್ತಿಯಲ್ಲಿ 25 ಲಕ್ಷ ಮರಗಳನ್ನು ಬೆಳೆಸುವ ಕಾರ್ಯಕ್ಕೆ ಚಾಲನೆಯನ್ನೂ ನೀಡಿದ್ದಾರೆ ಎಂದು ರವಿವರ್ಮ ಕುಮಾರ್ ತಿಳಿಸಿದರು.
ಹಿಮಾಚಲ ಪ್ರದೇಶ ಹೈಕೋರ್ಟಿನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ರಾವ್ ಮಾತನಾಡಿ, 22 ವರ್ಷಗಳ ಹಿಂದೆ ನಾನು ನ್ಯಾಯಮೂರ್ತಿಯಾಗಿದ್ದ ಕೋರ್ಟಿನಲ್ಲಿ ಮತ್ತೋರ್ವ ಕನ್ನಡಿಗ ನೇಮಕ ಆಗಿರುವುದು ಹೆಮ್ಮೆಯ ಸಂಗತಿ. ಸಾಮಾಜಿಕ ವ್ಯವಸ್ಥೆ ಬದಲಾವಣೆ ಕಾನೂನು ಮೂಲಕವೇ ಸಾಧ್ಯ. ಇದನ್ನು ಸರಳವಾಗಿ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ನಾವು ತಿಳಿಯಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಶೇಷಾದ್ರಿಪುರಂ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರಣೀತಾ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಲೇಖಕಿ ಇಂದಿರಾ ಕೃಷ್ಣಪ್ಪ ಸೇರಿದಂತೆ ಹಲವರಿದ್ದರು.
ಸಮಾಜವೇ ದೊಡ್ಡ ಗುರು
ವೃತ್ತಿಪರತೆಯಲ್ಲಿ ಯಶಸ್ಸು ಕಾಣಬೇಕಾದರೆ ವಕೀಲರು ಜನತೆಯೊಂದಿಗೆ ಬೆರೆಯಬೇಕು. ಜನರೊಂದಿಗೆ ಬೆರೆತಾಗ ಅನೇಕ ವಿಚಾರಗಳನ್ನು ತಿಳಿದು ಪರಿಪಕ್ವವಾಗಲು ಸಾಧ್ಯ. ವಕೀಲ ವಿದ್ಯಾರ್ಥಿಗಳಿಗೆ ಕಾಲೇಜು ಕೇವಲ ಔಪಚಾರಿಕ ಶಿಕ್ಷಣವನ್ನು ನೀಡುತ್ತದೆ. ಉಳಿದೆಲ್ಲಾ ವಿಷಯವನ್ನು ಸಮಾಜ ನಮಗೆ ಕಲಿಸುತ್ತದೆ. ಹಾಗಾಗಿ ಸಮಾಜವೇ ನಮಗೆ ದೊಡ್ಡ ಗುರು.
-ಎಲ್.ನಾರಾಯಣಸ್ವಾಮಿ, ಹಿಮಾಚಲ ಪ್ರದೇಶದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ