ಕೃಷ್ಣ ಮಠದಲ್ಲಿ ತುಳಸಿ ಸಂಕೀರ್ಥನಾ ಸ್ಪರ್ಧೆ
ಉಡುಪಿ, ಅ.12: ಉಡುಪಿಯ ತುಳು ಶಿವಳ್ಳಿ ಮಾಧ್ವ ಮಹಾಮಂಡಲ (ತುಶಿಮಾಮ), ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ತುಳಸೀ ಸಂಕೀರ್ಥನಾ ಸಪ್ತಾಹದಂಗವಾಗಿ ಸ್ಪರ್ಧೆಯೊಂದನ್ನು ಅ.14ರಿಂದ 20ರವರೆಗೆ ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಆಯೋಜಿಸಿದೆ.
ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ಪ್ರತ್ಯೇಕವಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಒಟ್ಟು 25 ತಂಡಗಳು ಭಾಗವಹಿಸುವುದನ್ನು ಖಚಿತಪಡಿಸಿವೆ ಎಂದು ತುಶಿಮಾಮದ ಅಧ್ಯಕ್ಷ ಕೆ.ಅರವಿಂದ ಆಚಾರ್ಯ ಅವರು ಇಂದು ಕೃಷ್ಣ ಮಠದ ಬಡಗುಮಳಿಗೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿದಿನ ಸಂಜೆ 4 ಗಂಟೆಗೆ ತುಳಸೀ ಸಂಕೀರ್ಥನಾ ಸ್ಪರ್ಧೆ ಪ್ರಾರಂಭಗೊಳ್ಳಲಿದ್ದು 7ಗಂಟೆಯವರೆಗೆ ನಡೆಯಲಿದೆ. ಪ್ರತಿದಿನ 4ರಿಂದ 5 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಸಂಕೀರ್ಥನಾ ತಂಡದಲ್ಲಿ ಕನಿಷ್ಠ 10 ಮಂದಿ ಇರುವುದು ಕಡ್ಡಾಯ. ತಂಡದ ಸದಸ್ಯರು ಸಾಂಪ್ರದಾಯಿಕ ಉಡುಪನ್ನು ಧರಿಸಬೇಕಾಗಿದೆ ಎಂದವರು ಹೇಳಿದರು.
ತುಳಸೀ ಸಂಕೀರ್ಥನಾ ಸಪ್ತಾಹದ ಉದ್ಘಾಟನೆ ಅ.14ರಂದು ಅಪರಾಹ್ನ 3:30ಕ್ಕೆ ನಡೆಯಲಿದೆ. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಸ್ಪರ್ಧೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಕೊನೆಯ ದಿನವಾದ ಅ.20ರಂದು ಸಮಾರೋಪ ಸಮಾರಂಭದಲ್ಲಿ ಪ್ರತಿ ವಿಭಾಗದ ಅಗ್ರ ಮೂರು ತಂಡಗಳಿಗೆ ಕ್ರಮವಾಗಿ ರೂ.5000, ರೂ.3000 ಹಾಗೂ 2000ರೂ. ನಗದು ಬಹುಮಾನ ವಿತರಿಸಲಾಗುವುದು ಎಂದು ಅರವಿಂದ ಆಚಾರ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತುಶಿಮಾಮದ ಪ್ರಧಾನ ಕಾರ್ಯದರ್ಶಿ ಕೆ. ರವಿಪ್ರಕಾಶ್ ಭಟ್, ಉಪಾಧ್ಯಕ್ಷರಾದ ಬಾಲಾಜಿ ರಾಘವೇಂದ್ರ ಆಚಾರ್ಯ, ಕೆ.ಕೃಷ್ಣಮೂರ್ತಿ ರಾವ್ ಹಾಗೂ ರಂಜನ್ ಕಲ್ಕೂರ ಉಪಸ್ಥಿತರಿದ್ದರು.







