ಭಾರತದ ಸಿಸ್ಟರ್ ಮರಿಯಂ ತ್ರೇಸಿಯಾರಿಗೆ ಸಂತ ಪದವಿ ಘೋಷಿಸಿದ ಪೋಪ್ ಫ್ರಾನ್ಸಿಸ್
ವ್ಯಾಟಿಕನ್ ಸಿಟಿ, ಅ. 13: ವ್ಯಾಟಿಕನ್ ಸಿಟಿಯಲ್ಲಿ ರವಿವಾರ ನಡೆದ ಭವ್ಯ ಸಮಾರಂಭವೊಂದರಲ್ಲಿ, ಕೇರಳದ ನನ್ ಸಿಸ್ಟರ್ ಮರಿಯಮ್ ತ್ರೇಸಿಯಾ ಸೇರಿದಂತೆ ಐವರನ್ನು ನೂತನ ಸಂತರನ್ನಾಗಿ ಪೋಪ್ ಫ್ರಾನ್ಸಿಸ್ ಘೋಷಿಸಿದ್ದಾರೆ.
1914ರಲ್ಲಿ ತ್ರಿಶೂರ್ನಲ್ಲಿ ‘ಕಾಂಗ್ರಿಗೇಶನ್ ಆಫ್ ದ ಸಿಸ್ಟರ್ಸ್ ಆಫ್ ದ ಹೋಲಿ ಫ್ಯಾಮಿಲಿ’ಯನ್ನು ಸ್ಥಾಪಿಸಿದ್ದ ಮರಿಯಮ್ ತ್ರೇಸಿಯಾರನ್ನು ಸೇಂಟ್ ಪೀಟರ್ಸ್ ಚೌಕದಲ್ಲಿ ನಡೆದ ಸಮಾರಂಭದಲ್ಲಿ ಉನ್ನತ ಪದವಿಗೆ ಏರಿಸಲಾಯಿತು.
ಇದೇ ಸಂದರ್ಭದಲ್ಲಿ ಇಂಗ್ಲೆಂಡ್ನ ಕಾರ್ಡಿನಲ್ ಜಾನ್ ಹೆನ್ರಿ ನ್ಯೂಮನ್, ಸ್ವಿಟ್ಸರ್ಲ್ಯಾಂಡ್ನ ಲೇವುಮನ್ ಮಾರ್ಗರೆಟ್ ಬೇಸ್, ಬ್ರೆಝಿಲ್ನ ಸಿಸ್ಟರ್ ಡಲ್ಸ್ ಲೋಪ್ಸ್ ಮತ್ತು ಇಟಲಿಯ ಸಿಸ್ಟರ್ ಜಿಯುಸೆಪಿನ ವಾನಿನಿ ಅವರನ್ನೂ ಪೋಪ್ ಸಂತ ಪದವಿಗೇರಿಸಿದರು.
ಈ ಸಂದರ್ಭದಲ್ಲಿ ನೂತನ ಸಂತರ ಬೃಹತ್ ಚಿತ್ರಗಳನ್ನು ಸೇಂಟ್ ಪೀಟರ್ಸ್ ಬ್ಯಾಸಿಲಿಕದಲ್ಲಿ ತೂಗು ಹಾಕಲಾಗಿತ್ತು. ಸಂತ ಪದವಿ ಪ್ರದಾನ ಸಮಾರಂಭದಲ್ಲಿ ಸಾವಿರಾರು ಭಕ್ತರು ಹಾಜರಿದ್ದರು.
ವಿದೇಶ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳೀಧರನ್ ಈ ಸಂದರ್ಭದಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು.
ಸೈರೊ-ಮಲಬಾರ್ ಚರ್ಚ್ನಲ್ಲಿ ನಾಲ್ವರು ಸಂತರು
ರವಿವಾರದ ಸಂತ ಪದವಿಯೊಂದಿಗೆ ಕೇರಳದ ಶತಮಾನಗಳ ಹಳೆಯ ಸೈರೊ-ಮಲಬಾರ್ ಚರ್ಚ್ ನಾಲ್ವರು ಸಂತರನ್ನು ಹೊಂದಿದಂತಾಗಿದೆ. ಈ ಪೈಕಿ ಮೊದಲನೆಯವರು ಸಿಸ್ಟರ್ ಆಲ್ಫೋನ್ಸಾ. ಅವರನ್ನು 2008ರಲ್ಲಿ ಸಂತ ಪದವಿಗೆ ಏರಿಸಲಾಗಿತ್ತು.
ಇತರರೆಂದರೆ ಫಾದರ್ ಕುರಿಯಕೋಸ್ ಎಲಿಯಾಸ್ ಚಾವರ (ಅವರು ಚಾವರ ಅಚೆನ್ ಎಂಬ ಹೆಸರಿನಿಂದ ಜನಪ್ರಿಯರು) ಮತ್ತು ಸಿಸ್ಟರ್ ಯುಫ್ರೇಶ್ಯಾ (ಅವರು ಎವುಪ್ರಸಿಯಮ್ಮ ಎಂಬ ಹೆಸರಿನಿಂದ ಪ್ರಖ್ಯಾತರು). ಇವರಿಬ್ಬರನ್ನು ಪೋಪ್ 2014ರಲ್ಲಿ ಸಂತರೆಂದು ಘೋಷಿಸಿದ್ದಾರೆ.
1876ರಲ್ಲಿ ಬ್ಯಾಪ್ಟಿಸಮ್
ಮರಿಯಮ್ ತ್ರೇಸಿಯಾ ತನ್ನ ಬದುಕಿನ ಮೊದಲಾರ್ಧದಲ್ಲಿ ಕೇವಲ ತ್ರೇಸಿಯಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರು. ಈ ಹೆಸರನ್ನು ಅವರಿಗೆ 1876 ಮೇ 3ರಂದು ಬ್ಯಾಪ್ಟಿಸಮ್ ಸಂದರ್ಭದಲ್ಲಿ ಇಡಲಾಗಿತ್ತು.
1904ರ ಬಳಿಕ, ಅವರು ಜನರು ತನ್ನನ್ನು ಮರಿಯಮ್ ತ್ರೆಸಿಯಾ ಎಂಬುದಾಗಿ ಕರೆಯಬೇಕೆಂದು ಬಯಸಿದರು.
ಕೇರಳ ಮುಖ್ಯಮಂತ್ರಿ ಹರ್ಷ
‘‘ತ್ರಿಶೂರ್ನ ಕಾಂಗ್ರಿಗೇಶನ್ ಆಫ್ ದ ಹೋಲಿ ಫ್ಯಾಮಿಲಿಯ ಸ್ಥಾಪಕಿ ಮರಿಯಮ್ ತ್ರೇಸಿಯಾಗೆ ಪೋಪ್ ಫ್ರಾನ್ಸಿಸ್ ಸಂತ ಪದವಿ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮುದಾಯದ ಸದಸ್ಯರನ್ನು ಅಭಿನಂದಿಸುತ್ತಾರೆ’’ ಎಂದು ಕೇರಳ ಮುಖ್ಯಮಂತ್ರಿ ಕಚೇರಿ ರವಿವಾರ ಟ್ವೀಟ್ ಮಾಡಿದೆ.