ದಬಾಂಗ್ 3: ಫಸ್ಟ್ಲುಕ್ನಲ್ಲಿ ಮಿಂಚಿದ ಸುದೀಪ್
ಕನ್ನಡದ ಕಿಚ್ಚ ಸುದೀಪ್ ದಬಾಂಗ್ 3 ಮೂಲಕ ಬಾಲಿವುಡ್ಗೆ ಮತ್ತೆ ವಾಪಸಾಗಿದ್ದಾರೆ. ಹೀರೋ ಸಲ್ಮಾನ್ ಖಾನ್ ಎದುರು ಅವರು ಅಪ್ಪಟ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಹೌದು. ಚಿತ್ರದಲ್ಲಿ ಸುದೀಪ್ ‘ಬಲ್ಲಿ’ ಎಂಬ ಹೆಸರಿನ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ತಾನು ಈ ಹಿಂದೆಯೂ ನೆಗೆಟಿವ್ ಶೇಡ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ ‘ದಬಾಂಗ್ 3’ ಚಿತ್ರದಲ್ಲಿ ತನಗೆ ದೊರೆತಿರುವಂತಹ ವಿಲನ್ ಪಾತ್ರದಲ್ಲಿ ತಾನು ಯಾವತ್ತೂ ದೊರೆತಿಲ್ಲ ಎಂದು ಸುದೀಪ್ ಹೇಳಿಕೊಂಡಿದ್ದಾರೆ.
ಸುದೀಪ್ ಅಮೆರಿಕದಲ್ಲಿದ್ದಾಗ, ಸಲ್ಮಾನ್ ಸಹೋದರ ಸೊಹೈಲ್ಖಾನ್ ಅವರಿಗೆ ವಿಡಿಯೋ ಕರೆ ಮಾಡಿ ದಬಾಂಗ್3ಯಲ್ಲಿ ನಟಿಸಲು ಆಹ್ವಾನ ನೀಡಿದ್ದರಂತೆ.ಆದರೆ ನಿರ್ದೇಶಕ ಪ್ರಭುದೇವಾ ವಿಡಿಯೋಕಾಲ್ನಲ್ಲಿ ಚಿತ್ರದ ಬಗ್ಗೆ ಚರ್ಚಿಸಲು ಒಪ್ಪಲಿಲ್ಲವಂತೆ. ಸುದೀಪ್ ಮೈಸೂರಿಗೆ ವಾಪಸ್ ಬಂದಿದ್ದೇತಡ, ಪ್ರಭುದೇವಾ ಅಲ್ಲಿಗೆ ಧಾವಿಸಿ ಚಿತ್ರದ ಸ್ಕ್ರಿಪ್ಟ್ ಅನ್ನು ಸವಿಸ್ತಾರವಾಗಿ ವಿವರಿಸಿದರು. ಸುದೀಪ್ಗೂ ಪಾತ್ರರಚನೆ ಇಷ್ಟವಾಯಿತಂತೆ. ಹಾಗೆ ಕೂಡಲೇ ದಬಾಂಗ್3ನ್ನ್ಲು ಒಪ್ಪಿಕೊಂಡರು.
ಸಲ್ಮಾನ್ ಹಾಗೂ ಸುದೀಪ್ ನಡುವೆ ಫೈಟಿಂಗ್ ದೃಶ್ಯಗಳು ಚಿತ್ರದ ಪ್ರಮುಖ ಹೈಲೈಟ್ಸ್ ಆಗಲಿವೆ. ದಬಾಂಗ್3 ಚಿತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಹೊತ್ತಿ ಉರಿಯುತ್ತಿರುವ ಹಳ್ಳಿಯ ಹಿನ್ನೆಲೆಯಲ್ಲಿ ಸೂಟ್ಧರಿಸಿದ ಸುದೀಪ್ ಕ್ರೂರವಾಗಿ ದಿಟ್ಟಿಸುತ್ತಾ ನಿಂತುಕೊಂಡಿರುವ ಈ ದೃಶ್ಯವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿತ್ರದ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣವೇ ಸುಮಾರು 20 ದಿನಗಳವರೆಗೆ ನಡೆದಿದೆ. ಮುಂಬೈನ ದಹಿಸರ್ನಲ್ಲಿ ವಿಶೇಷವಾಗಿ ನಿರ್ಮಿಸಲಾದ ಸೆಟ್ನಲ್ಲಿ ಸಲ್ಮಾನ್ ಹಾಗೂ ಸುದೀಪ್ ನಡುವಿನ ಬಿಗ್ಫೈಟ್ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಸುದೀಪ್ ಕೊನೆಯ ಬಾರಿಗೆ ಹಿಂದಿಯಲ್ಲಿ ರಾಮ್ಗೋಪಾಲ್ ನಿರ್ದೇಶನದ ‘ರಕ್ತ ಚರಿತ 2’ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅದ್ದೂರಿ ಬಜೆಟ್ನ ದಬಾಂಗ್3 ಮೂಲಕ ಕನ್ನಡದ ಕಿಚ್ಚ ಬಾಲಿವುಡ್ಗೆ ವಾಪಸಾಗುತ್ತಿರುವುದು ಅವರ ಅಭಿಮಾನಿಗಳನ್ನು ಪುಳಕಗೊಳಿಸಿದೆ.