ಪ್ರತ್ಯೇಕ ಘಟನೆ: ಕಳ್ಳರೆಂಬ ಶಂಕೆಯಲ್ಲಿ ಗುಂಪು ಹಲ್ಲೆಗೆ ಓರ್ವ ಬಲಿ
ಇಬ್ಬರಿಗೆ ಗಾಯ

ಕೋಲ್ಕತಾ,ಅ.13: ಪ.ಬಂಗಾಳದ ಎರಡು ಜಿಲ್ಲೆಗಳಲ್ಲಿ ರವಿವಾರ ಬೆಳಗಿನ ಜಾವ ಗುಂಪು ಥಳಿತದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಓರ್ವ ಅಪರಿಚಿತ ವ್ಯಕ್ತಿ ಕೊಲ್ಲಲ್ಪಟ್ಟಿದ್ದು,ಇತರ ಇಬ್ಬರು ಗಾಯಗೊಂಡಿದ್ದಾರೆ.
ಹೌರಾ ಜಿಲ್ಲೆಯ ಸಲ್ಕಿಯಾ ಪ್ರದೇಶದಲ್ಲಿ ಗೋದಾಮೊಂದರ ಸಮೀಪ 30ರ ಹರೆಯದ ವ್ಯಕ್ತಿಯನ್ನು ಕಳ್ಳನೆಂದು ಶಂಕಿಸಿ ಸ್ಥಳೀಯರು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದರಿಂದ ತೀವ್ರವಾಗಿ ಗಾಯಗೊಂಡ ಆತ ಸಾವನ್ನಪ್ಪಿದ್ದಾನೆ. ಪ್ರದೇಶದಲ್ಲಿಯ ಸೆಕ್ಯುರಿಟಿ ಕ್ಯಾಮರಾಗಳ ಫೂಟೇಜ್‌ಗಳ ನೆರವಿನಿಂದ ದುಷ್ಕರ್ಮಿಗಳ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಓರ್ವ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೌರಾ ನಗರ ಡಿಸಿಪಿ ವೈ.ರಘುವಂಶಿ ಅವರು ತಿಳಿಸಿದರು.
ಪ್ರತ್ಯೇಕ ಘಟನೆಯಲ್ಲಿ ಮಾಲ್ಡಾ ಜಿಲ್ಲೆಯ ಇಂಗ್ಲೀಷ್ ಬಝಾರ್ ಪ್ರದೇಶದಲ್ಲಿ ಕಳ್ಳರೆಂಬ ಶಂಕೆಯಲ್ಲಿ ಇಬ್ಬರು ಯುವಕರನ್ನು ಗುಂಪೊಂದು ಥಳಿಸಿದೆ.
ಬೆಳಗಿನ ಜಾವ ಮಹಿಳಾ ಕಾಲೇಜೊಂದರ ಬಳಿ ಅಲೆದಾಡುತ್ತಿದ್ದ ಹೈಯುಲ್ ಶೇಖ್(22) ಮತ್ತು ಸಲಾಂ ಶೇಖ್(20) ಎಂಬ ಯುವಕರನ್ನು ಕೆಲವು ಸ್ಥಳೀಯರು ಹಿಡಿದಿದ್ದರು. ತಾವು ಜಿಲ್ಲೆಯ ಕಾಲಿಯಾಚಕ್ ಪ್ರದೇಶದ ಸುಜಾಪುರ ನಿವಾಸಿಗಳೆಂದು ಯುವಕರು ತಿಳಿಸಿದಾಗ ಗುಂಪು ಅವರನ್ನು ಹಿಗ್ಗಾಮುಗ್ಗಾ ಥಳಿಸಿದೆ. ಸುಜಾಪುರ ಸಂಘಟಿತ ಅಪರಾಧಗಳಿಗೆ ಕುಖ್ಯಾತವಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಕಾಲೇಜಿನ ಬಳಿ ವಾಸವಿರುವ ಸ್ನೇಹಿತನ ಭೇಟಿಗಾಗಿ ತಾವು ಬಂದಿದ್ದೆವು. ಸ್ಥಳೀಯರು ತಮ್ಮನ್ನು ಕಳ್ಳರೆಂದು ಭಾವಿಸಿದ್ದರು. ಪೊಲೀಸರು ಬಾರದಿದ್ದರೆ ಅವರು ತಮ್ಮನ್ನು ಕೊಲ್ಲುತ್ತಿದ್ದರು ಎಂದು ಸಲಾಂ ಶೇಖ್ ಸುದ್ದಿಗಾರರಿಗೆ ತಿಳಿಸಿದ.
ಪೊಲೀಸರು ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದು,ಅವೇಳೆಯಲ್ಲಿ ಯುವಕರು ಅಲ್ಲೇನು ಮಾಡುತ್ತಿದ್ದರು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.