ರಮೇಶ್ ಆತ್ಮಹತ್ಯೆ ವಿಚಾರದಲ್ಲಿ ಸರಕಾರದ ಮೇಲೆ ಆರೋಪ ಸರಿಯಲ್ಲ: ಆರೋಗ್ಯ ಸಚಿವ ಶ್ರೀರಾಮುಲು

ಬಳ್ಳಾರಿ, ಅ.13: ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಸರಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲವೆಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೆಲ್ಲ ಅಕ್ರಮ ಆಸ್ತಿ, ಹಣ ಗಳಿಸಿದ್ದಾರೆಯೋ ಅವರೆಲ್ಲರ ಮನೆ ಮೇಲೆ ಯಾವುದೇ ಸರಕಾರ ಇದ್ದರೂ ಐಟಿ ದಾಳಿಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲೇ ಬಿಜೆಪಿ ನಾಯಕರ ಮನೆ ಮೇಲೆಯೂ ದಾಳಿಯಾಗಿದೆ. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿರುವಾಗ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲವೆಂದು ತಿಳಿಸಿದರು.
ಮೆಡಿಕಲ್ ಸೀಟು ಹಂಚಿಕೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪದ ಮೇಲೆ ಕೆಲವು ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಆಗುತ್ತಿದ್ದು, ಅದನ್ನು ಸರಕಾರದ ಮೇಲೆ ಹಾಕುವಂತಹ ಕೆಲಸ ಆಗಬಾರದು. ನ್ಯಾಯಯುತವಾಗಿ ತನಿಖೆ ನಡೆಯಬೇಕು. ತನಿಖೆಗೆ ಎಲ್ಲರೂ ಸಹಕಾರ ಕೊಡಬೇಕು. ತನಿಖೆ ನಡೆದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಹೇಳಿದರು.
ರಾಮುಲು ಡಿಸಿಎಂ ಆಗಬೇಕೆಂಬ ವಾಲ್ಮೀಕಿ ಶ್ರೀಗಳ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಉಪಮುಖ್ಯಮಂತ್ರಿ ಆಗಬೇಕೆಂಬುದು ಎಲ್ಲ ಮಠಾಧೀಶರ ಹಾಗೂ ಜನರ ಬೇಡಿಕೆ ಆಗಿದೆ. ನಮ್ಮ ಸರಕಾರ, ನಮ್ಮ ನಾಯಕರು ನನ್ನನ್ನು ಗುರುತಿಸುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.







