ಗಾಂಧೀಜಿಯ ಬದುಕೇ ಒಂದು ಸಂದೇಶ: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್
ಬೆಂಗಳೂರು, ಅ. 13: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬದುಕೇ ಒಂದು ಸಂದೇಶ ಎಂದು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಸತ್ಯಾನ್ವೇಷಣೆ ಮತ್ತು ಇಂದಿನ ಭಾರತ ವಿಚಾರ ಸಂಕಿರಣ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ ಅವರು ಮಹಾತ್ಮರಾಗಲು ಅವರು ದೇಶದ ಬಗ್ಗೆ ಹೊಂದಿದ್ದ ಅಭಿಮಾನವೇ ಮುಖ್ಯ ಕಾರಣ. ಅವರು ಸತ್ಯವನ್ನು ಆಗ್ರಹಿಸಲು ಸತ್ಯಾಗ್ರಹ ಮಾಡುತ್ತಿದ್ದರು. ಗಾಂಧೀಜಿಯ ಬದುಕೇ ಒಂದು ಸಂದೇಶ ಎಂದು ಹೇಳಿದರು.
ಮಹಾನ್ ವ್ಯಕ್ತಿಗಳನ್ನು ಪೂಜಿಸುವ ಬದಲು ಅವರ ತತ್ವ-ಆದರ್ಶಗಳನ್ನು ಪಾಲಿಸಬೇಕು. ಮೂಢನಂಬಿಕೆಯಿಂದ ಹೊರಬರಬೇಕು. ಸ್ವಂತ ಚಿಂತನೆಯಿಂದ ಒಳ್ಳೆಯ ಜೀವನ ನಡೆಸಬೇಕು. ಸತ್ಯವೇ ದೇವರು ಎಂದು ತಿಳಿದು ಬಾಳಬೇಕು ಎಂದು ಅವರು ಸಲಹೆ ಮಾಡಿದರು.
ಕೊಳದ ಮಠದ ಡಾ. ಶಾಂತವೀರ ಸ್ವಾಮೀಜಿ ಮಾತನಾಡಿ, ಮಹಾನ್ ನಾಯಕರ ಆದರ್ಶಗಳನ್ನು ಪರಿಪಾಲಿಸಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಜೀವಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ್ ರೆಡ್ಡಿ, ಉದ್ಯಮಿ ಡಾ. ಎಸ್.ಅಕ್ಬರ್ ಭಾಷ, ಡಾ.ಗುಣವಂತ ಮಂಜು, ರೇಣುಕಾ ಪ್ರಸಾದ್, ಡಾ.ಪ್ರಿಯಾ ಹ್ಯಾಂಡ್ರೊ, ಡಾ. ರಾಜೇಶ್ವರಿ, ಡಾ. ಬಿ.ಡಿ ಭೂಕಾಂತ್ ಇದ್ದರು.







