ವೈದ್ಯಕೀಯ ಕಾಲೇಜುಗಳಲ್ಲಿ ಪ್ರಯೋಗಾಲಯ ಶುಲ್ಕ ರದ್ಧತಿಗೆ ಚಿಂತನೆ

ಬೆಂಗಳೂರು, ಅ.13: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ತನ್ನ ವ್ಯಾಪ್ತಿಯ ಕಾಲೇಜು ಆಸ್ಪತ್ರೆಗಳಲ್ಲಿನ ಪ್ರಯೋಗಾಲಯಗಳಲ್ಲಿ ಶುಲ್ಕ ರದ್ಧು ಮಾಡಲು ನಿರ್ಧರಿಸಿದ್ದು, ಅಧಿಕೃತ ಆದೇಶ ನೀಡಬೇಕಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಪ್ರಯೋಗಾಲಯದ ಚಿಕಿತ್ಸಾ ಶುಲ್ಕ ರದ್ಧು ಮಾಡಲು ಶಿಕ್ಷಣ ನಿರ್ದೇಶನಾಲಯ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡು ಉಳ್ಳವರು 1.26 ಲಕ್ಷದಷ್ಟಿದ್ಟು, ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.
ರಾಜ್ಯಾದ್ಯಂತ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಏಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 10 ಸ್ವಾಯತ್ತ ಕಾಲೇಜು ಸೇರಿ 17 ವೈದ್ಯಕೀಯ ಕಾಲೇಜುಗಳಿವೆ. ಎಪಿಎಲ್ ಕಾರ್ಡ್‌ದಾರರು ಪಾವತಿಸುವ ಶುಲ್ಕದ ಅರ್ಧ ದರವನ್ನು ನಿಗದಿ ಮಾಡಿ ಅ.1 ರಿಂದಲೇ ಹೊಸ ಶುಲ್ಕ ಪಟ್ಟಿಯನ್ನು ಸರಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗಳಲ್ಲಿ ಜಾರಿ ಮಾಡಲಾಗಿತ್ತು.
ಹೊರ ರೋಗಿಗಳಿಗೆ ಪಡೆಯುವ ಶುಲ್ಕದಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಶೇ.50, ಹಿರಿಯ ನಾಗರೀಕರಿಗೆ ಶೇ.30 ಹಾಗೂ ಎಸ್ಸಿ-ಎಸ್ಟಿ ವರ್ಗದವರಿಗೆ ಸಂಪೂರ್ಣ ಉಚಿತ ಎಂಬ ಸ್ಲಾಬ್‌ಗಳನ್ನು ನಿಗದಿ ಮಾಡಲಾಗಿತ್ತು. ಹೊರ ರೋಗಿಯ ನೋಂದಣಿ ಶುಲ್ಕ 10 ರೂ.ನಿಂದ ಆರಂಭವಾಗಿ ನಾಲ್ಕು ಸಾವಿರ ರೂ.ವರೆಗೆ ವಿವಿಧ ಹಂತದ ಪ್ರಯೋಗಾಲಯದಲ್ಲಿ ನಿಗದಿ ಮಾಡಲಾಗಿದೆ.
ಇತ್ತೀಚಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಪಿಎಲ್ ಕಾರ್ಡುದಾರರು ಬಡವರಾಗಿದ್ದು, ಶುಲ್ಕ ಪಾವತಿ ಮಾಡುವುದು ಕಷ್ಟ. ಶುಲ್ಕ ನೀಡದಿದ್ದಲ್ಲಿ ವೈದ್ಯರು ಚಿಕಿತ್ಸೆ ನಿರಾಕರಿಸುವ ಸಾಧ್ಯತೆಯಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ಹೇಮಲತಾ, ನಿರ್ದೇಶಕ ಗಿರೀಶ್, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ಸೇರಿದಂತೆ ಮತ್ತಿತರು ಈ ನಿರ್ಣಯ ಕೈಗೊಂಡಿದ್ದಾರೆ.
ಅನುದಾನದ ಕೊರತೆ: ರಾಜ್ಯ ಸರಕಾರ ಈಗಾಗಲೇ ರೈತರ ಸಾಲ ಮನ್ನಾ ಮಾಡಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಸೇರಿ ಇತರೆ ಇಲಾಖೆಗಳಿಗೆ ಅನುದಾನ ಕಡಿತ ಮಾಡಲಾಗಿದೆ. ಸರಕಾರದ ಅನುದಾನ ವೇತನಕ್ಕೆ ಸರಿಯಾಗುತ್ತಿದೆ. ಹೊರ ರೋಗಿಗಳಿಂದ ಬರುತ್ತಿದ್ದ ಶುಲ್ಕದಲ್ಲಿ ಆಸ್ಪತ್ರೆಗಳ ನಿರ್ವಹಣೆ ಮಾಡಲಾಗುತ್ತಿತ್ತು. ಇದೀಗ ಅದೂ ಉಚಿತವಾದಲ್ಲಿ ಆರ್ಥಿಕ ತೊಂದರೆ ಉಂಟಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ಹೇಳಿವೆ.







