ವಿದೇಶಿ ಕರೆನ್ಸಿ ನೆಪದಲ್ಲಿ ದರೋಡೆ: ಮಹಿಳೆ ಸೇರಿ ಹಲವರ ಬಂಧನ

ಬೆಂಗಳೂರು, ಅ.14: ವಿದೇಶಿ ಕರೆನ್ಸಿ ನೆಪದಲ್ಲಿ ದರೋಡೆ ಮಾಡುತ್ತಿದ್ದ ಆರೋಪದಡಿ ಮಹಿಳೆ ಸೇರಿ ಹಲವರನ್ನು ಬಂಧಿಸುವಲ್ಲಿ ಇಲ್ಲಿನ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ರೂವಾರಿ ಶಾಫೀಯಾ ಬೇಗಂ(34), ಶಕೀಲ್ (19), ರಹೀಂ ಕುರೇಶಿ (24), ದಿಲ್ವರ್ (39), ಶಾನವಾಝ್(30), ಅನ್ವರ್(24), ಇಬ್ರಾಹಿಂ (30), ರಹೀಮ್ ಶೇಕ್ (56) ಬಂಧಿತ ಆರೋಪಿಗಳೆಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ರೊಹೀಣಿ ಕಟೋಚ್ ತಿಳಿಸಿದ್ದಾರೆ.
ಅ.4 ರಂದು ಜಯನಗರದ 5ನೆ ಬ್ಲಾಕ್‌ನ 3ನೆ ಕ್ರಾಸ್‌ನ ಮಸೀದಿ ಬಳಿ ಸೈಯದ್ ಎಂಬುವವರಿಗೆ 50 ರಿಯಾಲ್ ಕರೆನ್ಸಿ ನೋಟನ್ನು ಕಡಿಮೆ ದರಕ್ಕೆ ಕೊಡುವ ನೆಪದಲ್ಲಿ ಅವರಿಂದ ಮೂರೂವರೆ ಲಕ್ಷ ರೂ.ಗಳನ್ನು ತರಿಸಿಕೊಂಡು ಆಸಲಿ ಒಂದು ನೋಟನ್ನು ಮಾತ್ರ ನೀಡಿ ಹಲ್ಲೆ ನಡೆಸಿ ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಬಾಡಿಗೆ ವಾಹನಗಳಲ್ಲಿ ಸಂಚರಿಸಿ ವಾಹನ ಚಾಲಕರು ಹಾಗೂ ಸಾರ್ವಜನಿಕರನ್ನು ಸಂಪರ್ಕಿಸಿ ವಿದೇಶಿ ಕರೆನ್ಸಿ ಕಡಿಮೆ ದರಕ್ಕೆ ಕೊಡುವುದಾಗಿ ನಂಬಿಸಿ, ಆಸೆ ಹುಟ್ಟಿಸಿ ದರೋಡೆ ಮಾಡುತ್ತಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ.





