ಶಾಲಾ ಕಾಲೇಜುಗಳ ಸಮೀಪ ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಕ್ಕೆ ದ.ಕ. ಡಿಸಿ ಸೂಚನೆ

ಮಂಗಳೂರು, ಅ.14: ಜಿಲ್ಲೆಯ ಶಾಲಾ ಕಾಲೇಜು ಸೇರಿದಂತೆ ಶೈಕ್ಷಣಿಕ ಕೇಂದ್ರಗಳ ಸುತ್ತಮುತ್ತಲಿನಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಸೂಚಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ತಂಬಾಕು ನಿಯಂತ್ರಣ ಕೋಶದ ಸಭೆಯಲ್ಲಿ ಅವರು ಮಾತಾನಾಡಿದರು.
ತಂಬಾಕು ವ್ಯಸನ ತಡೆಗಟ್ಟಲು ಶಾಲಾ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿಗಳ ಮೂಲಕ ಪರಿಣಾಮಕಾರಿಯಾದ ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು. ಶಾಲೆಯ ನೂರು ಗಜ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಡಿಸಿ ಸಿಂಧು ರೂಪೇಶ್ ಹೇಳಿದರು.
ತಂಬಾಕು ವ್ಯಸನಕ್ಕೆ ಯುವ ಜನರು ಹೆಚ್ಚು ಬಲಿಯಾಗುತ್ತಿದ್ದು, ಇದನ್ನು ತಡೆಗಟ್ಟಲು ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು. ಈಗಾಗಲೇ ಹಲವಾರು ಶಾಲೆಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಅರಿವು ಕಾರ್ಯಕ್ರಮಗಳು ನಡೆದಿದೆ. ಅದರಲ್ಲಿ ಹಲವು ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳೆಂದು ಗುರುತಿಸಿದೆ. ಈ ಶಾಲೆಗಳಲ್ಲಿ ತಂಬಾಕು ಮುಕ್ತ ವಲಯ (ಯಲ್ಲೋ ಲೈನ್) ರಚನೆಯಾಗಬೇಕು ಎಂದ ಡಿಸಿ, ತಂಬಾಕು ವ್ಯಸನ ಮುಕ್ತ ಕೇಂದ್ರವನ್ನು ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ಥಾಪನೆ ಮಾಡಬೇಕು ಹಾಗೂ ಇ-ಸಿಗರೇಟು ಮಾರಾಟ ಹಾಗೂ ಜಾಹೀರಾತು ನಿಷೇಧದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಕುಟುಂಬ ಕಲ್ಯಾಣ ಅಧಿಕಾರಿ ಸಿಖಂದರ್ ಪಾಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರಾಜೇಶ್ ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ರಾಜೇಶ್ವರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.







