ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಪಟ್ಟು: ಮುಷ್ಕರ ಆರಂಭಿಸಿದ ಎಚ್‌ಎಎಲ್ ಕಾರ್ಮಿಕರು
ಬೆಂಗಳೂರು, ಅ.14: ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್) ಸಿಬ್ಬಂದಿ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 20 ಸಾವಿರಕ್ಕೂ ಅಧಿಕ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಇಲ್ಲಿನ ಎಚ್‌ಎಎಲ್ ಕೇಂದ್ರ ಕಚೇರಿ ಮುಂಭಾಗ ಜಮಾಯಿಸಿದ ಸಿಬ್ಬಂದಿ, ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ, ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಸಾರ್ವಜನಿಕ ವಲಯದ ಉದ್ಯಮ ಎಚ್‌ಎಎಲ್‌ನ ಉದ್ಯೋಗಿಗಳು ಮತ್ತು ಆಡಳಿತ ಮಂಡಳಿಯ ನಡುವೆ ಸಂಬಳ, ಭಡ್ತ್ತಿ, ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಚರ್ಚೆ ನಡೆಯುತ್ತಿದ್ದು, ನೌಕರರ ಬೇಡಿಕೆಗೆ ಆಡಳಿತ ಮಂಡಳಿ ಮನ್ನಣೆ ನೀಡದೆ ಹಠಮಾರಿತನ ಧೋರಣೆ ಮುಂದುವರಿಸಿದ ಹಿನ್ನೆಲೆಯಲ್ಲಿ ಅನಿವಾರ್ಯದಿಂದ ಉದ್ಯೋಗಿಗಳು ಮುಷ್ಕರ ಪ್ರಾರಂಭಿಸಿದ್ದಾರೆ.
ವಿವಿಧ ಭಾಗಗಳ ಎಚ್‌ಎಎಲ್ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ಕೇಂದ್ರ ಕಚೇರಿ ಬೆಂಗಳೂರಿನ ಎಚ್‌ಎಎಲ್ ಕಚೇರಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಎಚ್‌ಎಎಲ್‌ನ ಟ್ರೇಡ್ ಯೂನಿಯನ್ ಸಮನ್ವಯ ಸಮಿತಿ ಕರೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಆರಂಭಗೊಂಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂಸ್ತಾನ್ ವಿಮಾನ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸನ್, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಾಗಿ 2016 ರಿಂದ ಉದ್ಯೋಗಿಗಳು ಮತ್ತು ಕೇಂದ್ರ ಆಡಳಿತ ಮಂಡಳಿಯ ನಡುವೆ ಮಾತುಕತೆ ನಡೆದು ಅದು 2017ರ ಜನವರಿ 1 ರಿಂದ ಜಾರಿಗೆ ಬರಬೇಕಾಗಿತ್ತು. ಒಪ್ಪಂದದಂತೆ ಬೇಡಿಕೆಯನ್ನು ಈಡೇರಿಸದ ಆಡಳಿತ ಮಂಡಳಿಯ ಕ್ರಮದ ವಿರುದ್ಧ ತಿರುಗಿ ಬಿದ್ದಿರುವ ಉದ್ಯೋಗಿಗಳು ಇಂದಿನಿಂದ ಅನಿರ್ದಿಷ್ಟ ಅವಧಿ ಮುಷ್ಕರ ಕೈಗೊಳ್ಳಲಾಗಿದೆ ಎಂದರು.
ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ. ಉದ್ಯೋಗಿಗಳು ಹಲವು ವರ್ಷಗಳಿಂದ ಸಂಬಳ ಏರಿಕೆ ಮಾಡುವಂತೆ ಮನವಿ ಮಾಡಿದ್ದರೂ ಗಮನ ಹರಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೋರಾಟ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.