ಫ್ರೀಡಂ ಪಾರ್ಕ್‌ನಲ್ಲಿ ಅ.18 ರಿಂದ ಅಂತರ್‌ರಾಷ್ಟ್ರೀಯ ಮಟ್ಟದ ಆಹಾರ ಮೇಳ
ಬೆಂಗಳೂರು, ಅ.14: ಅಂತರ್‌ರಾಷ್ಟ್ರೀಯ ಮಟ್ಟದ ಸಸ್ಯಾಹಾರ ಆಹಾರಮೇಳವನ್ನು ಅ.18 ರಿಂದ 20ರವರೆಗೆ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಟ ಸಿಹಿ ಕಹಿ ಚಂದ್ರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಆಹಾರೋತ್ಸವ ವತಿಯಿಂದ ಅತ್ಯಂತ ವಿಶೇಷ ಹಾಗೂ ವಿಶಿಷ್ಟವಾದ ಆಹಾರ ಮೇಳ ಹಮ್ಮಿಕೊಳ್ಳಲಾಗಿದ್ದು, ಗುಣಮಟ್ಟದ ಹಾಗೂ ವೈವಿಧ್ಯಮಯ ಆಹಾರವನ್ನು ಬಯಸುವ ಆಹಾರ ಪ್ರೇಮಿಗಳಿಗೆ ಒಂದೇ ಕಡೆ ನಾನಾ ಬಗೆಯ ಆಹಾರ ಸಿಗಲಿದೆ ಎಂದು ಅವರು ತಿಳಿಸಿದರು.
ಒಂದು ಲಕ್ಷಕ್ಕೂ ಅಧಿಕ ಆಸಕ್ತರು, ಒಂದು ಸಾವಿರಕ್ಕೂ ಅಧಿಕ ವೈವಿಧ್ಯಮಯ ಆಹಾರ ಬಗೆಗಳು, ನೂರಕ್ಕೂ ಹೆಚ್ಚಿನ ಮಳಿಗೆಗಳನ್ನು ಒಳಗೊಂಡು ಮಹಾ ಉತ್ಸವವಾಗಲಿದ್ದು, ಇಷ್ಟವಾದ ದೇಶಿಯ ಹಾಗು ವಿದೇಶಿಯ ಸಸ್ಯಾಹಾರಿ ತಿಂಡಿಗಳನ್ನು ರುಚಿ ನೋಡಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನವೀನ್ ಸುರೇಶ್, ವಿನಯ್ ನಾಗರಾಜ್, ವಿನಯ್ ಸತ್ಯಂ, ರೇಣುಕೇಶ್ ಬಿಂಗೇರಿ ಇದ್ದರು.
Next Story