ವಿದೇಶದಲ್ಲಿ ಬುದ್ಧ, ಶಾಂತಿ ಎನ್ನುವ ಮೋದಿ ಭಾರತದಲ್ಲಿ ಯುದ್ಧದ ಬಗ್ಗೆ ಮಾತನಾಡುತ್ತಾರೆ: ಕನ್ಹಯ್ಯ ಕುಮಾರ್
"ಸರಕಾರದ ವಿರುದ್ಧ ಮಾತನಾಡಿದರೆ ದೇಶದ್ರೋಹಿಯ ಪಟ್ಟ"

ಕಲಬುರಗಿ, ಅ.15: ಪ್ರಧಾನಿ ನರೇಂದ್ರ ಮೋದಿ ವಿದೇಶಿ ಪ್ರವಾಸದಲ್ಲಿದ್ದಾಗ ಬುದ್ಧ, ಶಾಂತಿ ಮಂತ್ರಗಳನ್ನು ಪಠಿಸುತ್ತಾರೆ. ಆದರೆ, ಭಾರತಕ್ಕೆ ಹಿಂತಿರುಗಿದೊಡನೆ ಯುದ್ಧ ಎನ್ನಲು ಆರಂಭಿಸುತ್ತಾರೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ದಲಿತರು ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಸರಕಾರದ ವಿರುದ್ಧ ಯಾರಾದರೂ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಆದರೆ, ಪ್ರಧಾನಿ ಮೋದಿ ವಿದೇಶಗಳಲ್ಲಿ ಮಾತ್ರ ಬುದ್ಧನ ಶಾಂತಿ ಮಂತ್ರ ಪಠಿಸುತ್ತಾರೆ ಎಂದು ಟೀಕಿಸಿದರು.
ಸಾರ್ವಜನಿಕ ಉದ್ಯಮಗಳನ್ನು ಒಂದೊಂದಾಗಿ ಖಾಸಗಿ ವಲಯಕ್ಕೆ ವರ್ಗಾಯಿಸುತ್ತಿದ್ದಾರೆ. ಈ ಹಿಂದೆ ಪೆಟ್ರೋಲಿಯಂ ಉದ್ಯಮದಲ್ಲಿದ್ದ ರಿಲಯನ್ಸ್ ಸಂಸ್ಥೆ, ನಷ್ಟದಿಂದ ಪಾರಾಗಲು ಆ ಕ್ಷೇತ್ರದ ಸಹವಾಸವೇ ಬೇಡವೆಂದು ದೂರ ಸರಿದಿತ್ತು. ಈಗ ಭಾರತ್ ಪೆಟ್ರೋಲಿಯಂ ಖಾಸಗಿ ವಲಯಕ್ಕೆ ವಹಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಂತೆ, ರಿಲಯನ್ಸ್ ಸಂಸ್ಥೆ ಭಾರತ್ ಪೆಟ್ರೋಲಿಯಂನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.





