ಸದ್ಯದಲ್ಲೇ 4 ಸಾವಿರಕ್ಕೂ ಅಧಿಕ ನೌಕರರು ಬೀದಿಪಾಲು: ಹಾಸ್ಟೆಲ್ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ
ಬೆಂಗಳೂರು, ಅ.15: ರಾಜ್ಯಾದ್ಯಂತ ಹಾಸ್ಟೆಲ್‌ನಲ್ಲಿ ದುಡಿಯುತ್ತಿರುವ ನೌಕರರನ್ನು ನಿವೃತ್ತಿವರೆಗೂ ಸೇವೆಯಲ್ಲಿ ಮುಂದುವರಿಸಬೇಕು ಹಾಗೂ ಬಾಕಿಯಿರುವ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೂ ನೂರಾರು ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಇಲ್ಲಿಯೇ ಧರಣಿ ಮುಂದುವರಿಸಿದ್ದು, ಕೂಡಲೇ ಬಾಕಿ ವೇತನವನ್ನು ಒಂದೇ ಕಂತಿನಲ್ಲಿ ಪಾವತಿ ಮಾಡಬೇಕು ಎಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ, ರಾಜ್ಯಾದ್ಯಂತ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಡಿ ದರ್ಜೆಯ ನೌಕರರು ಇದೀಗ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಿಂದಿನ ಸರಕಾರ ನೀಡಿದ್ದ ಭರವಸೆಯನ್ನು ಈಡೇರಿಸಲು ಮುಂದಾಗಿಲ್ಲ ಎಂದು ದೂರಿದರು.
ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಮಾಡಲು ಎಲ್ಲ ರೀತಿಯ ಅರ್ಹತೆಯಿದೆ. ಆದರೆ, ಹಿಂದಿನ ಸರಕಾರವು ಎಸೆಸೆಲ್ಸಿ ಉತ್ತೀರ್ಣವಾಗಿಲ್ಲ ಎಂಬ ನೆಪವೊಡ್ಡಿ, ಹೊಸದಾಗಿ ನೇಮಕಾತಿ ಪ್ರಕ್ರಿಯೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಪ್ರತಿಭಟನೆ ನಡೆಸಿದ ವೇಳೆ ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ಎರಡು ಬಾರಿ 6 ತಿಂಗಳು ಮುಂದುವರಿಸುವುದಾಗಿ ಹೇಳಿದ್ದರು ಎಂದರು.
ಅನಂತರ ಬಂದ ಯಡಿಯೂರಪ್ಪರ ಸರಕಾರ ಕಳೆದ ತಿಂಗಳು ಪ್ರತಿಭಟನೆ ಮಾಡಿದ ವೇಳೆ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಇದೀಗ ಸಮಯ ಮುಗಿದಿದೆ. ಅಲ್ಲದೆ, ದಸರಾ ರಜೆಗಳು ಮುಗಿದ ಬಳಿಕ 4 ಸಾವಿರಕ್ಕೂ ಅಧಿಕ ನೌಕರರು ಬೀದಿಪಾಲಾಗಲಿದ್ದಾರೆ. ಆದುದರಿಂದಾಗಿ ಕೂಡಲೇ ರಾಜ್ಯ ಸರಕಾರ ಇವರನ್ನು ಮುಂದುವರಿಸುವ ಆದೇಶ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.
ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ನೌಕರರು ಈಗ ಖಾಯಂ ನೇಮಕಾತಿ ಅಲ್ಲದಿದ್ದರೂ ಪರವಾಗಿಲ್ಲ ಗುತ್ತಿಗೆಯಲ್ಲಿ ದುಡಿಯಲು ಸಿದ್ಧರಿದ್ದಾರೆ. ಆದರೆ, ಸರಕಾರಗಳು ಇರುವ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿ, ಹೊಸಬರನ್ನು ನೇಮಕ ಮಾಡಿಕೊಂಡಿದೆ. ಇದು ಸರಿಯಾದ ಕ್ರಮವಲ್ಲ. ಇರುವ ಸಿಬ್ಬಂದಿಯನ್ನು ಮುಂದುವರಿಸಲು ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ, ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿರುವ ಸರಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ, ಸ್ವಚ್ಛತೆ ಮೊದಲಾದ ಹುದ್ದೆಗಳಲ್ಲಿ ಸಾವಿರಾರು ನೌಕರರಿದ್ದಾರೆ. ಅವರಿಗೆ ಕಳೆದ 8-10 ತಿಂಗಳಿನಿಂದ ವೇತನ ನೀಡಿಲ್ಲ. ಇವರಿಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನು ದೀಪಾವಳಿ ಹಬ್ಬದೊಳಗೆ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಭೀಮಶೆಟ್ಟಿ ಹಂಪಳ್ಳಿ, ಖಜಾಂಚಿ ಚಂದ್ರಪ್ಪ ಹೊಸ್ಕೇರಾ, ಸಹ ಕಾರ್ಯದರ್ಶಿ ಕೆ.ಹನುಮೇಗೌಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ನೌಕರರು ಪಾಲ್ಗೊಂಡಿದ್ದರು.
ಬೇಡಿಕೆಗಳು:
- ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗಳನ್ನು ಸೇವೆಯಲ್ಲಿ ಮುಂದುವರಿಸಿ, ನಿವೃತ್ತಿವರೆಗೆ ಸೇವಾ ಭದ್ರತೆ ನೀಡಬೇಕು
- ಹತ್ತಾರು ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ವೇತನ ಹಾಗೂ ಅರಿಯರ್ಸ್ ಹಣ ಪಾವತಿ ಮಾಡಬೇಕು.
- ಎಲ್ಲ ನೌಕರರಿಗೂ ಇಎಸ್‌ಐ, ಪಿಎಫ್ ನೀಡಬೇಕು.
- ಹಾಸ್ಟೆಲ್ ಹೊರ ಸಂಪನ್ಮೂಲ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ವಾರದ ರಜೆಯನ್ನು ನೀಡಬೇಕು.