ಪಾಕಿಸ್ತಾನಕ್ಕೆ ನೀರು ಹರಿಯಲು ಬಿಡಲಾರೆ: ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ
ಚಕ್ರಿದಾದ್ರಿ/ಕುರುಕ್ಷೇತ್ರ (ಹರ್ಯಾಣ), ಅ. 15: ಭಾರತದಿಂದ ಪಾಕಿಸ್ತಾನಕ್ಕೆ ನೀರು ಹರಿಯಲು ಅವಕಾಶ ನೀಡಲಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಇದೇ ಸಂದರ್ಭ ಅವರು, ಪಾಕಿಸ್ತಾನದ ಚಾರಿತ್ರಿಕ ಕರ್ತಾರ್ಪುರ ಸಾಹಿಬ್ ಗುರುದ್ವಾರ್ ಹಾಗೂ ಭಾರತದ ನಡುವೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡರ್ ಯೋಜನೆಯಿಂದ ತನಗೆ ಸಂತಸವಾಗಿದೆ ಎಂದರು.
ಹರ್ಯಾಣದ ಚಕ್ರಿದಾದ್ರಿಯಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಮೋದಿ, ಕಳೆದ 70 ವರ್ಷಗಳಿಂದ ಭಾರತ ಹಾಗೂ ಹರ್ಯಾಣದ ರೈತರಿಗೆ ಸೇರಬೇಕಾದ ನೀರು ಪಾಕಿಸ್ತಾನಕ್ಕೆ ಹರಿಯುತ್ತಿದೆ. ಮೋದಿ ಈ ನೀರು ಹರಿಯುವುದನ್ನು ನಿಲ್ಲಿಸಲಿದ್ದಾರೆ. ಅಲ್ಲದೆ, ಅದನ್ನು ನಿಮ್ಮ ಮನೆಗಳಿಗೆ ಪೂರೈಸಲಿದ್ದಾರೆ ಎಂದರು.
ಪಾಕಿಸ್ತಾನಕ್ಕೆ ಹರಿಯುವ ನೀರಿನ ಹಕ್ಕು ಹರ್ಯಾಣ ಹಾಗೂ ರಾಜಸ್ಥಾನದ ಕೃಷಿಕರಿಗೆ ಸೇರಿದ್ದು. ಇದನ್ನು ಈ ಹಿಂದಿನ ಸರಕಾರ ಗುರುತಿಸಲಿಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರು ಹೇಳದೆ ಅವರು ಇತ್ತೀಚೆಗೆ ಕೈಗೊಂಡ ವಿದೇಶಿ ಪ್ರವಾಸವನ್ನು ಅವರು ಟೀಕಿಸಿದರು.
ವಿಧಿ 370 ರದ್ದುಗೊಳಿಸುವ ನಿರ್ಧಾರಕ್ಕೆ ಜಮ್ಮು ಹಾಗೂ ಕಾಶ್ಮೀರದೊಂದಿಗೆ ಪೂರ್ಣ ದೇಶವೇ ಬೆಂಬಲಕ್ಕೆ ನಿಂತಿತು. ಆದರೆ, ಕೆಲವು ಕಾಂಗ್ರೆಸ್ ನಾಯಕರು ದೇಶ ಹಾಗೂ ವಿದೇಶಗಳಲ್ಲಿ ಈ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.