ಮೋದಿ ಕೈಗಾರಿಕೋದ್ಯಮಿಗಳ ಲೌಡ್ ಸ್ಪೀಕರ್: ರಾಹುಲ್ ಗಾಂಧಿ
ಯುವಾತ್ಮಲ್/ವಾರ್ಧಾ, ಅ. 15: ಪ್ರಧಾನಿ ನರೇಂದ್ರ ಮೋದಿ ನಿರ್ದಿಷ್ಟ ಕೈಗಾರಿಕೋದ್ಯಮಿಗಳ 'ಲೌಡ್ ಸ್ಪೀಕರ್' ಎಂದು ಮಂಗಳವಾರ ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಳವುಗೈಯಲು ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಕಿಸೆಗಳ್ಳತನಂತೆ ಅವರ ಕಾರ್ಯತಂತ್ರ ಎಂದಿದ್ದಾರೆ.
ಅಕ್ಟೋಬರ್ 21ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವಿದರ್ಭದ ಪ್ರಚಾರದಲ್ಲಿ ಅವರು ಮೋದಿ ಸರಕಾರ ಕಾರ್ಪೊರೇಟ್ ತೆರಿಗೆಯನ್ನು ರದ್ದುಗೊಳಿಸಿರುವುದನ್ನು ಟೀಕಿಸಿದರು. ಯುವಾತ್ಮಲ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಚಂದ್ರ ಯಾನ ಹಾಗೂ ಜಮ್ಮುಕಾಶ್ಮೀರದಲ್ಲಿ ವಿಧಿ 370 ರದ್ದುಗೊಳಿಸಿರುವುದರ ಬಗ್ಗೆ ಮಾತನಾಡುತ್ತಾರೆ. ಆದರೆ, ರೈತರ ಸಂಕಷ್ಟ ಹಾಗೂ ಉದ್ಯೋಗ ನಷ್ಟದ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಕಾರ್ಪೊರೇಟ್ ತೆರಿಗೆ ರದ್ದುಗೊಳಿಸಿರುವ ಸರಕಾರದ ನಿರ್ಧಾರವನ್ನು ಟೀಕಿಸಿದ ರಾಹುಲ್ ಗಾಂಧಿ, ಇಂತಹ ಸೌಲಭ್ಯಗಳನ್ನು ನಿರ್ದಿಷ್ಟ ಕೈಗಾರಿಕೋದ್ಯಮಿಗಳಿಗೆ ವಿಸ್ತರಿಸಲಾಗಿದೆ. ಆದರೆ, ಬಡವರಿಗೆ ಅಲ್ಲ ಎಂದರು.