ಅಖಿಲ ಭಾರತ ಅಂತರ್ ವಿವಿ ಮಹಿಳಾ ಸ್ವಾಶ್ ರ್ಯಾಕೆಟ್ ಚಾಂಪಿಯನ್‌ಶಿಪ್‌ಗೆ ಚಾಲನೆ

ಉಡುಪಿ, ಅ.16: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ಮೂರು ದಿನಗಳ ಕಾಲ ಮಣಿಪಾಲದ ಮೆರೆನಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಲಾಗಿರುವ 2019-20ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳಾ ಸ್ಕ್ವಾಶ್ ರ್ಯಾಕೆಟ್ ಚಾಂಪಿಯನ್‌ಶಿಪ್‌ಗೆ ಇಂದು ವಿದ್ಯುಕ್ತ ಚಾಲನೆ ನೀಡಲಾಯಿತು.
ಭಾರತದ ಅಂತಾರಾಷ್ಟ್ರೀಯ ಸ್ವಾಶ್ ಆಟಗಾರ ಹಾಗೂ ಭಾರತದ ಮೊದಲ ಏಷ್ಯನ್ ಜೂನಿಯರ್ ಸ್ಕ್ವಾಶ್ ರ್ಯಾಕೆಟ್ ಚಾಂಪಿಯನ್ ರವಿ ದೀಕ್ಷಿತ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿ, ಹೆಣ್ಣು ಮಕ್ಕಳು ಸ್ವಾಶ್ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕಾಲೇಜು ಶಿಕ್ಷಣ ಮುಗಿದ ಬಳಿಕ ಈ ಕ್ರೀಡೆಯನ್ನು ವೃತಿಪರವಾಗಿ ತೆಗೆದುಕೊಂಡು ಮುಂದುವರಿಸಬೇಕು. ಕ್ರೀಡೆಯು ಜೀವನ ಪರ್ಯಂತ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಹೆಯ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಜೊತೆಯಾಗಿ ಸಾಗಬೇಕು. ಅದಕ್ಕೆ ಕ್ರೀಡೆ ಬಹಳ ಮುಖ್ಯವಾಗಿರುತ್ತದೆ. ಕ್ರೀಡೆಗೆ ಮಣಿಪಾಲ ಅಕಾಡೆಮಿ ಎಲ್ಲ ರೀತಿಯ ಪ್ರೋತ್ಸಾಹವನ್ನು ನೀಡುತ್ತಿದೆ. ನಮ್ಮ ದೇಶ ಮಧುಮೇಹ ಹಾಗೂ ಹೃದ್ರೋಗಗಳ ರಾಜಧಾನಿ ಆಗುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಪ್ರತಿಯೊಬ್ಬರೂ ಕ್ರೀಡೆಗೆ ಮಹತ್ವ ನೀಡಬೇಕು ಎಂದು ಹೇಳಿದರು.
ಮಾಹೆ ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಮೆರೆನಾದ ಮುಖ್ಯಸ್ಥ ಡಾ.ಫೆಡ್ಡಿ ಡೇವಿಡ್, ಶ್ರೀಧರ್ ಎಚ್. ಉಪಸ್ಥಿತರಿದ್ದರು. ಮಾಹೆ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಶೋಭಾ ಎಂ.ಇ. ಕಾರ್ಯಕ್ರಮ ನಿರೂಪಿಸಿದರು.
ಈ ಕ್ರೀಡಾಕೂಟದಲ್ಲಿ ಮಣಿಪಾಲ ಮಾಹೆ, ಪುಣೆ, ರಾಜಸ್ತಾನ, ಜೈಪುರ, ಕೇರಳ, ರಾಯ್‌ಪುರ, ಚಂಡಿಗಡ್, ಚೈನ್ನೈಯ ಅಣ್ಣಾ ವಿವಿ, ಪಟಿಯಾಲ ಪಂಜಾಬಿ ವಿವಿ ಸೇರಿದಂತೆ 20ಕ್ಕೂ ಅಧಿಕ ವಿವಿಗಳು ಭಾಗವಹಿಸಿವೆ.
ಪಂಜಾಬ್, ಸಾವಿತ್ರಿಬಾಯಿ ಪುಲೆ ವಿವಿ ಮುನ್ನಡೆ
ಮಣಿಪಾಲದ ಮೆರೆನಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ 2019-20ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳಾ ಸ್ಕ್ವಾಶ್ ರ್ಯಾಕೆಟ್ ಚಾಂಪಿಯನ್‌ಶಿಪ್‌ನ ಮೊದಲ ದಿನಗಳ ಪಂದ್ಯಗಳಲ್ಲಿ ಚಂಡೀಗಡ್‌ದ ಪಂಜಾಬ್ ವಿವಿ ಹಾಗೂ ಪುಣೆಯ ಸಾವಿತ್ರಿಬಾಯಿ ಪುಲೆ ವಿವಿಗಳು ಜಯ ದಾಖಲಿಸಿ ಮುಂದಿನ ಸುತ್ತಿಗೆ ತೇರ್ಗಡೆಗೊಂಡಿವೆ.
ಪಂಜಾಬ್ ವಿವಿಯು ಎದುರಾಳಿ ಚೆನ್ನೈಯ ಅಣ್ಣಾ ವಿವಿಯನ್ನು 3-2 ಅಂತರದಿಂದ ಪ್ರಯಾಸಕರವಾಗಿ ಸೋಲಿಸಿದರೆ, ಪುಣೆ ತಂಡ, ರಾಜಸ್ಥಾನ್ ವಿವಿಯನ್ನು 3-1ರ ಅಂತರದಿಂದ ಸುಲಭವಾಗಿ ಹಿಮ್ಮೆಟ್ಟಿಸಿತು.
ಉಳಿದಂತೆ ಕೇರಳ ವಿವಿ, ಪಟಿಯಾಲದ ಪಂಜಾಬಿ ವಿವಿ, ಉದಯಪುರದ ಮೋಹನಲಾಲ್ ಸುಖಾಡಿಯಾ ವಿವಿಗಳು ತಮ್ಮ ಎದುರಾಳಿ ತಂಡಗಳು ಗೈರುಹಾಜರಾದ ಹಿನ್ನೆಲೆಯಲ್ಲಿ ವಾಕ್‌ಓವರ್ ಪಡೆದು ಮುಂದಿನ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದುಕೊಂಡಿವೆ.
ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಹಾಲಿ ಚಾಂಪಿಯನ್ ಮದ್ರಾಸ್ ವಿವಿ, ರನ್ನರ್ ಅಪ್ ಆಗಿರುವ ಆತಿಥೇಯ ಮಾಹೆ ವಿವಿ, ದಿಲ್ಲಿ ವಿವಿ ಹಾಗೂ ರಾಯ್‌ಪುರದ ಪಂಡಿತ್ ರವಿಶಂಕರ್ ಶುಕ್ಲ ವಿವಿ ತಂಡಗಳಿಗೆ ಈ ಬಾರಿ ನೇರವಾಗಿ ಕ್ವಾರ್ಟರ್ ಪೈನಲ್‌ಗೆ ಭಡ್ತಿ ನೀಡಲಾಗಿದೆ








