ಭೂ ಪರಿಹಾರ ಹಣ ನೀಡದೆ ವಂಚನೆ: ಕೆಐಎಡಿಬಿ ಅಧಿಕಾರಿ ಸೇರಿ ಏಳು ಮಂದಿಯ ಬಂಧನ

ಬೆಂಗಳೂರು, ಅ.16: ಭೂ ಪರಿಹಾರದ ಮೊತ್ತವನ್ನು ರೈತರಿಗೆ ನೀಡದೆ ವಂಚಿಸಿದ್ದ ಆರೋಪದಡಿ ಕೆಐಎಡಿಬಿಯ ಹಿರಿಯ ಸಹಾಯಕ ಸೇರಿದಂತೆ ಏಳು ಮಂದಿಯನ್ನು ಎಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಐಎಡಿಬಿಯ ಹಿರಿಯ ಸಹಾಯಕ ಎಲ್.ಶ್ರೀನಿವಾಸ್ ಹಾಗೂ ರೈತರಿಗೆ ಹಣ ವಂಚಿಸುತ್ತಿದ್ದ ದೇವರಾಜ್, ನಾರಾಯಣಸ್ವಾಮಿ, ಗಂಗಯ್ಯ, ಜಗದೀಶ್, ನವೀನ್ ಕುಮಾರ್, ಸಮೀರ್ ಪಾಷ, ಕೇಶವ ಬಂಧಿತ ಆರೋಪಿಗಳು. ಪರಿಶೀಲನೆ ವೇಳೆ ರೈತರಿಂದ ಪಡೆದಿರುವ ವಿವಿಧ ಬ್ಯಾಂಕ್ ಖಾತೆಗಳು, 13 ಖಾಲಿ ಚೆಕ್‌ಗಳು ಮತ್ತು ಸರಕಾರ ರೈತರಿಂದ ವಶಪಡಿಸಿಕೊಂಡ ರೈತರ ಭೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯ ಸರಕಾರ ಸೋಂಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶಕ್ಕಾಗಿ ಸುಮಾರು 800ಎಕರೆ ಜಮೀನನ್ನು ರೈತರಿಂದ ವಶಪಡಿಸಿಕೊಂಡಿದ್ದು, ಈ ಸಂಬಂಧ ರೈತರಿಗೆ ಭೂಪರಿಹಾರವಾಗಿ ಸೆ.20ರಂದು 50ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣವನ್ನು ನಿಜವಾದ ಫಲಾನುಭವಿಗಳಾದ ರೈತರಿಗೆ ತಲುಪದ ರೀತಿಯಲ್ಲಿ ಕೆಐಎಡಿಬಿ ಅಧಿಕಾರಿ, ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ವಂಚಿಸಿರುವುದು ನಗರ ವಿಭಾಗದ ಪೊಲೀಸ್ ಅಧೀಕ್ಷಕ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ನಡೆಸಿದ ತಪಾಸಣೆಯಲ್ಲಿ ತಿಳಿದುಬಂದಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







