ಆಣೆ-ಪ್ರಮಾಣ ಒಳ್ಳೆಯ ಬೆಳವಣಿಗೆಯಲ್ಲ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ
ಬೆಂಗಳೂರು, ಅ. 17: ರಾಜಕೀಯ ಮುಖಂಡರುಗಳು ಆಣೆ, ಪ್ರಮಾಣದ ಪ್ರಯತ್ನ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ ಅವರು ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರಾದ ಎಚ್.ವಿಶ್ವನಾಥ್ ಹಾಗೂ ಸಾ.ರಾ.ಮಹೇಶ್ ಅವರು ವೈಯಕ್ತಿಕ ಟೀಕೆ-ಟಿಪ್ಪಣಿಗಳನ್ನು ಮಾಡಿಕೊಳ್ಳಲಿ. ಆರೋಪ-ಪ್ರತ್ಯಾರೋಪಗಳಿಗೂ ಉತ್ತರಿಸಲಿ. ಆದರೆ, ಆ ವಿಚಾರಗಳನ್ನು ದೇವರ ಬಳಿಗೆ ಕೊಂಡೊಯ್ಯುವುದು ಸಲ್ಲ ಎಂದು ಆಕ್ಷೇಪಿಸಿದರು.
ತಮ್ಮ ತಮ್ಮ ವೈಯಕ್ತಿಕ ವಿಚಾರಕ್ಕೆ ದೇವರ ಮುಂದೆ ಆಣೆ ಪ್ರಮಾಣ ಮಾಡುವುದು ಒಳ್ಳೆಯದಲ್ಲ. ನಿಮ್ಮಗಳ ಆರೋಪ-ಪ್ರತ್ಯಾರೋಪಕ್ಕೆ ದೇವರನ್ನು ಸಾಕ್ಷಿ ಮಾಡಬೇಡಿ ಎಂದು ಮನವಿ ಮಾಡಿದ ಈಶ್ವರಪ್ಪ, ದೇವರ ಮೇಲೆ ಶ್ರದ್ಧೆ, ಭಕ್ತಿ ಇರಲಿ. ಸಮಾಜ ಹಾಗೂ ದೇಶಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಎಂದು ಸಲಹೆ ಮಾಡಿದರು.
ರಾಜಕಾರಣಿಗಳ ಈ ಆರೋಪಗಳ ಬಗ್ಗೆ ಜನರು ಸೂಕ್ತ ಸಂದರ್ಭದಲ್ಲಿ ತೀರ್ಮಾನ ಮಾಡುತ್ತಾರೆ. ದೇವರ ಮುಂದೆ ಆಣೆ, ಪ್ರಮಾಣ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದರಿಂದ ಯಾರಿಗೂ ಒಳಿತಾಗುವುದಿಲ್ಲ ಎಂದು ಈಶ್ವರಪ್ಪ ನುಡಿದರು.
ಶಕ್ತಿ ಮೀರಿ ಪ್ರಯತ್ನ: ಹಿಂದೆಂದೂ ಕಂಡರಿಯದ ಭೀಕರ ಜಲ ಪ್ರಳಯ ಉಂಟಾಗಿದ್ದು, ರಾಜ್ಯ ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸಲು ಶಕ್ತಿ ಮೀರಿ ಪ್ರಯತ್ನ ನಡೆಸಿದೆ, ಪರಿಹಾರ ಕಾರ್ಯಕ್ಕೆ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ತತ್ಕ್ಷಣವೇ ಸಂತ್ರಸ್ತರಿಗೆ ತಲಾ 10 ಸಾವಿರ ರೂ.ನೆರವು ನೀಡಲಾಗಿದೆ. ಅಲ್ಲದೆ, ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ.ಘೋಷಿಸಿದ್ದು, ಈಗಾಗಲೇ ಆರಂಭಿಕವಾಗಿ 1 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಬೆಳೆ ಹಾನಿಗೆ 123 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಕೇಂದ್ರ ಸರಕಾರದಿಂದಲೂ 1,200ಕೋಟಿ ರೂ.ಬಿಡುಗಡೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ-ತಮ್ಮ ಜಿಲ್ಲೆಗಳಲ್ಲಿ ಪ್ರವಾಹ ಪರಿಹಾರ ಕಾರ್ಯ ಚುರುಕುಗೊಳಿಸುತ್ತಿದ್ದಾರೆ. ಆದರೆ, ವಿಪಕ್ಷಗಳ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.
‘ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ನಮ್ಮ ಪಕ್ಷದ ಕೆಲ ನಾಯಕರು ತೆರಳಿದ್ದಾರೆ. ಆ ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿದೆ. ವಿಪಕ್ಷಗಳಿಗೆ ಟೀಕೆ ಮಾಡುವುದನ್ನು ಬಿಟ್ಟರೆ ಬೇರೆ ಏನೂ ವಿಚಾರಗಳಿಲ್ಲ. ಮಹಾರಾಷ್ಟ್ರದಲ್ಲಿ ಅವರೇನೇ ಮಾಡಿದರೂ ಸೋಲುವುದು ನಿಶ್ಚಿತ’
-ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ