ಬೆಂಗಳೂರು ನಗರದ ನಕ್ಷೆಗೆ ಹೈಟೆಕ್ ಸ್ಪರ್ಶ ನೀಡಲು ಬಿಬಿಎಂಪಿ ಸಿದ್ಧತೆ
![ಬೆಂಗಳೂರು ನಗರದ ನಕ್ಷೆಗೆ ಹೈಟೆಕ್ ಸ್ಪರ್ಶ ನೀಡಲು ಬಿಬಿಎಂಪಿ ಸಿದ್ಧತೆ ಬೆಂಗಳೂರು ನಗರದ ನಕ್ಷೆಗೆ ಹೈಟೆಕ್ ಸ್ಪರ್ಶ ನೀಡಲು ಬಿಬಿಎಂಪಿ ಸಿದ್ಧತೆ](https://www.varthabharati.in/sites/default/files/images/articles/2019/10/18/215386-1571418423.jpg)
ಬೆಂಗಳೂರು, ಅ.18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ನಗರದ ನಕ್ಷೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ. ಇಸ್ರೋದ ಉಪಗ್ರಹಗಳನ್ನು ಬಳಸಿಕೊಂಡು ಬೆಂಗಳೂರಿನ ನಕ್ಷೆಗೆ ಸಂಬಂಧಿಸಿದ ಹಳೇ ಕಡತಗಳನ್ನು ಸುಧಾರಿಸಲಿದೆ. ಶೀಘ್ರದಲ್ಲಿ ಬೆಂಗಳೂರಿನ ಭೂಪಟವನ್ನು ಮರುರಚನೆ ಮಾಡಲಿದ್ದು, ಉಪಗ್ರಹಗಳಿಂದ ತೆಗೆಯಲಾಗಿರುವ ಹೈ ರೆಸಲ್ಯೂಷನ್ ಛಾಯಾಚಿತ್ರಗಳನ್ನು ಬಳಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಳೇ ಕಡತಗಳಲ್ಲಿರುವ ಬೆಂಗಳೂರಿನ ನಕ್ಷೆಗೂ ಪ್ರಸ್ತುತ ಬೆಂಗಳೂರಿನ ನಕ್ಷೆಗೂ ಅಜಗಜಾಂತರ ವ್ಯತ್ಯಾಸವಿದೆ. ಕಳೆದ ಒಂದು ದಶಕದಲ್ಲಿ ನಗರ ಊಹೆಗೂ ನಿಲುಕದಂತೆ ವಿಸ್ತರಣೆಯಾಗಿದೆ. ಕಾಂಕ್ರೀಟ್ ಕಟ್ಟಡಗಳು ನಾಯಿಕೊಡೆಗಳಂತೆ ಹರಡಿವೆ. ಉಪಗ್ರಹಗಳಿಂದ ಇತ್ತೀಚಿಗೆ ತೆಗೆಯಲಾದ ಛಾಯಾಚಿತ್ರಗಳನ್ನು ಬಳಸಿಕೊಂಡು ಬೆಂಗಳೂರಿನ ಹೊಸ ಹೈಟೆಕ್ ನಕ್ಷೆ ರಚನೆಯಾಗಲಿದೆ. ಇದರಲ್ಲಿ ಪ್ರತಿಯೊಂದು ಕಟ್ಟಡ, ಓಣಿ, ಬೀದಿ, ಕಾಲನಿ, ರಸ್ತೆ, ರಾಜಕಾಲವೆ ಎಲ್ಲವೂ ದಾಖಲಾಗಲಿವೆ. ಇದಕ್ಕಾಗಿ ಬಿಬಿಎಂಪಿಯು ಇಸ್ರೋದ ಕಾರ್ಟೋಸ್ಯಾಟ್-2 ಉಪಗ್ರಹವನ್ನು ಬಳಸಿಕೊಳ್ಳುವ ಕುರಿತು ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ.
ಇಸ್ರೋದಿಂದ ಮಾಹಿತಿ ವ್ಯವಸ್ಥೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ ಇಸ್ರೊ ಜಿಯೋ ಸ್ಪೆಷಲ್ ಆಧಾರಿತ ಆಸ್ತಿ ತೆರಿಗೆ ಮಾಹಿತಿ ವ್ಯವಸ್ಥೆ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಪಾಲಿಕೆಗೆ ತೆರಿಗೆ ಸಂಗ್ರಹಕ್ಕೆ ಅನುಕೂಲವಾಗಲಿದೆ. ಅಲ್ಲದೆ, ನಾಗರಿಕರು ತಮ್ಮ ಆಸ್ತಿ ತೆರಿಗೆ ಪಾವತಿ ಕಂತುಗಳನ್ನು ಪರಿಶೀಲಿಸಲು ಇದರಿಂದ ಅನುಕೂಲವಾಗಲಿದೆ. ಈ ಸೌಲಭ್ಯದಿಂದ ಮೂರು ಕೋನಗಳಲ್ಲಿ ಕಟ್ಟಡಗಳ ನಕ್ಷೆ ದೊರೆಯಲಿದೆ. ಪ್ರಸ್ತುತ ನಗರದಲ್ಲಿ 19 ಲಕ್ಷ ಆಸ್ತಿಗಳಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.