Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಲಡ್ಡುಗಳ ಹಬ್ಬ : ದೀಪಾವಳಿ

ಲಡ್ಡುಗಳ ಹಬ್ಬ : ದೀಪಾವಳಿ

ಇಸ್ಮತ್ ಫಜೀರ್ಇಸ್ಮತ್ ಫಜೀರ್19 Oct 2019 5:56 PM IST
share
ಲಡ್ಡುಗಳ ಹಬ್ಬ : ದೀಪಾವಳಿ

ದೀಪಾವಳಿ ಎಂದ ಕೂಡಲೇ ಬಾಲ್ಯದ ನೆನಪುಗಳು ಗರಿದೆರುತ್ತವೆ. ದೀಪಾವಳಿಯೆಂದರೆ ಬೆಳಕಿನ ಹಬ್ಬ ಎನ್ನುತ್ತಾರೆ. ನನ್ನ ಪಾಲಿಗದು ಪಟಾಕಿಯ ಹಬ್ಬವಾಗಿತ್ತು, ಲಡ್ಡು, ಮಿಠಾಯಿಯ ಹಬ್ಬವಾಗಿತ್ತು.

ಈ ನಿಟ್ಟಿನಲ್ಲಿ ನನ್ನ ಬಾಲ್ಯದ ದೀಪಾವಳಿಯ ಕುರಿತಂತೆ ನನ್ನ ನೆನಪುಗಳಲ್ಲಿ ಒಂದಿಷ್ಟನ್ನು ಚುಟುಕಾಗಿ ಇಲ್ಲಿ ದಾಖಲಿಸುವೆ.

ನಾನು ಚಿಕ್ಕ ಹುಡುಗನಾಗಿದ್ದಾಗ ನಮಗೆ ಅತ್ಯಂತ ಅಗ್ಗದ ಬೆಲೆಯಲ್ಲಿ ಸಿಗುತ್ತಿದ್ದ ಪಟಾಕಿ ಚಿಕ್ಕ ಬಿಂದಿಯಂತದ್ದು (ಹಣೆ ಬೊಟ್ಟಿನಂತಹದ್ದು) ಅದರ ಒಂದು ಪುಟ್ಟ ಪೊಟ್ಟಣಕ್ಕೆ ಇಪ್ಪತ್ತೈದು ಪೈಸೆ ಬೆಲೆಯಿದ್ದ ನೆನಪು.ಅದರಿಂದ ಒಂದೊಂದೇ ಬಿಂದಿಯಂತಹ ಪಟಾಕಿಯನ್ನು ತೆಗೆದು ಕಲ್ಲಿನಲ್ಲಿ ಬಡಿದು ಸಿಡಿಸುತ್ತಿದ್ದೆವು. ಸಿಡಿಯುವುದೆಂದರೆ ಭಯಂಕರ ಸಿಡಿತವೇನಲ್ಲ. ‘ಟಪ್’ ಎಂಬ ಒಂದು ಸದ್ದು. ಆ ಸದ್ದಿಗೆ ಆಗುವ ಖುಷಿ ಹೇಳ ತೀರದು. ಎಲ್ಲಾದರೂ ಒಂದು ಪಟಾಕಿ ಸಿಡಿಯದಿದ್ದರೆ.. ‘‘ಎಂತ ಸಾವು ಮಾರ್ರೆ... ಅವ ಪೊಟ್ಟು ಪಟಾಕಿ ಕೊಟ್ಟು ಮಂಗ ಮಾಡಿದ್ದು’’ ಎಂದು ನಿರಾಶೆಯಾಗುತ್ತಿದ್ದೆವು.

ಅದರದ್ದೇ ಒಂದುದ್ದದ ಮಾಲೆ ಸಿಗುತ್ತಿತ್ತು. ಅದಕ್ಕೆ ಕೇಪು ಪಟಾಕಿ ಎನ್ನುತ್ತಿದ್ದೆವು.ಅದನ್ನು ಒಡೆಯಬೇಕೆಂದರೆ ಪಿಸ್ತೂಲು ಬೇಕು. ಆಗ ಎಲ್ಲಾ ಮಕ್ಕಳ ಕೈಯಲ್ಲಿ ಪಿಸ್ತೂಲುಗಳಿಲ್ಲ. ನನ್ನ ನೆನಪಿನಲ್ಲಿ ಆ ಪಿಸ್ತೂಲಿಗೆ ಐದು ರೂಪಾಯಿ ಬೆಲೆಯಿತ್ತು. ಆಗ ನಮ್ಮ ಪಾಲಿಗದು ಬಹು ದುಬಾರಿ. ನನ್ನಲ್ಲಿ ಒಂದು ಪಿಸ್ತೂಲಿತ್ತು. ಅದರ ಒಂದು ಗುಂಡಿಯನ್ನು ಜಗ್ಗಿದರೆ ಅದು ಕುತ್ತಿಗೆ ಕೊಯ್ದು ಹಾಕಿದ ಕೋಳಿಯಂತೆ ತೆರೆಯುತ್ತಿತ್ತು. ಅದರೊಳಗೆ ಚಕ್ರಾಕಾರದಲ್ಲಿ ಕೇಪು ಪಟಾಕಿ ಇಟ್ಟು ಪಿಸ್ತೂಲನ್ನು ಬಂದ್ ಮಾಡಿ ಅದರ ಕುದುರೆ ಒತ್ತಿದರೆ ಟಪ್ ಟಪ್ ಎಂದು ಸದ್ದಾಗುತ್ತಿತ್ತು. ಅದರಲ್ಲಾದರೆ ನಿರಂತರ ನಾನ್ ಸ್ಟಾಪಾಗಿ ಪಟಾಕಿ ಒಡೆಯಲು ಸಾಧ್ಯವಾಗುತ್ತಿತ್ತು. ಆಗೆಲ್ಲಾ ಪಿಸ್ತೂಲಿಲ್ಲದ ಮಕ್ಕಳು ‘‘ನನಗೊಮ್ಮೆ ಕೊಡಾ’’ ಎಂದರೆ ನಾನು ಅವರಿಗೊಂದು ಶರ್ತ ಹಾಕುತ್ತಿದ್ದೆ. ಕೊಡುತ್ತೇನೆ ಆದರೆ ಕೇಪು ನೀನು ತರಬೇಕು. ಕೇಪಿಗೆ ಒಂದು ಪೊಟ್ಟಣಕ್ಕೆ ಐವತ್ತು ಪೈಸೆ ಬೆಲೆಯಿತ್ತು. ಅದರಲ್ಲಿ ಅರ್ಧ ನನಗೆ ಉಳಿದರ್ಧ ದುಡ್ಡು ಕೊಟ್ಟು ಕೇಪು ತಂದವನಿಗೆ. ಆಗೆಲ್ಲಾ ಕಳ್ಳ ಪೊಲೀಸ್ ಆಟವಾಡುವಾಗ ಪಿಸ್ತೂಲಿದ್ದವರು ಪೊಲೀಸ್. ಪಿಸ್ತೂಲಿಲ್ಲದವರಿಗೆ ಕಳ್ಳನ ಪಾತ್ರ. ನನಗೆ ಕೆಲವೊಮ್ಮೆ ಬೇಜಾರಾಗಿ ನನ್ನ ಓರಗೆಯ ಪಿಸ್ತೂಲಿಲ್ಲದ ಹುಡುಗರಿಗೆ ಒಮ್ಮೆ ಪಿಸ್ತೂಲು ಕೊಟ್ಟು ಅವರನ್ನು ಪೊಲೀಸರಾಗಿಸುತ್ತಿದ್ದೆ ಮತ್ತು ನನ್ನದೇ ಸ್ವಂತ ಪಿಸ್ತೂಲಿದ್ದರೂ ನಾನು ಕಳ್ಳನ ಪಾತ್ರದಲ್ಲೂ ಆಡುತ್ತಿದ್ದೆ.

ನೆಲಚಕ್ರ, ರಾಕೆಟ್, ಹಾವು, ಮಾಲೆ ಪಟಾಕಿ ಮುಂತಾದ ಪಟಾಕಿಗಳಿದ್ದರೂ ಅವು ನಮ್ಮ ಕೈಗೆಟಕುತ್ತಿರಲಿಲ್ಲ. ಅದಾಗ್ಯೂ ದೀಪಾವಳಿಯ ಸೀಸನ್ ನಲ್ಲಿ ಒಮ್ಮೆಯಾದರೂ ಅವು ಮನೆಯಲ್ಲೇ ನೋಡ ಸಿಗುತ್ತಿದ್ದವು. ಆದರೆ ಅದಕ್ಕೆ ಬೆಂಕಿ ಕೊಟ್ಟು ಉರಿಸುವ ಭಾಗ್ಯ ನಮಗೆಲ್ಲಾ ಸಿಗುತ್ತಿರಲಿಲ್ಲ. ದೊಡ್ಡವರು ಉರಿಸುವುದನ್ನು ನಾವು ಮಕ್ಕಳೆಲ್ಲಾ ಸುತ್ತಲೂ ನಿಂತು ನೋಡುತ್ತಿದ್ದೆವು.

ಅಪರೂಪಕ್ಕೆ ಬೀಡಿ ಪಟಾಕಿ, ಸುರುಸುರು ಕಡ್ಡಿ ಸಿಗುತ್ತಿತ್ತು. ಬೀಡಿ ಪಟಾಕಿಗೆ ದೊಡ್ಡ ಹುಡುಗರೆಲ್ಲಾ ಕೈಯಲ್ಲೇ ಹಿಡಿದು ಬೆಂಕಿ ಕೊಟ್ಟು ಎಸೆಯುತ್ತಿದ್ದರು. ನಮಗೆ ಆ ಧೈರ್ಯ ಬರದೇ ಒಂದು ಕಾಗದದ ತುಂಡಿಗೆ ಬೆಂಕಿ ಕೊಟ್ಟು ಅದರ ಇನ್ನೊಂದು ತುದಿಯಲ್ಲಿ ಬೀಡಿ ಪಟಾಕಿ ಇಟ್ಟು ಸುಡುತ್ತಿದ್ದೆವು. ಬೀಡಿ ಪಟಾಕಿ ಒಂದಕ್ಕೆ ಇಪ್ಪತ್ತೈದು ಪೈಸೆ ಬೆಲೆಯಿದ್ದುದರಿಂದ ಅದರ ಮಜಾ ಒಂದೇ ಸದ್ದಿಗೆ ಮುಗಿಯುತ್ತಿತ್ತು ಆದುದರಿಂದ ನಾವು ಅದಕ್ಕೆ ಆದ್ಯತೆ ಕೊಡುತ್ತಿರಲಿಲ್ಲ. ಅದರ ಬೆಲೆಗೆ ಒಂದು ಪೊಟ್ಟಣ ಬಿಂದಿ ಪಟಾಕಿ ಸಿಗುತ್ತಿತ್ತು. ಅದರಿಂದ ಹೆಚ್ಚು ಆಟ ಆಡಬಹುದೆಂದು ಅದಕ್ಕೆ ಆದ್ಯತೆ ನೀಡುತ್ತಿದ್ದೆವು.ಮಾಲೆ ಪಟಾಕಿ ಎಂಬ ನೂರಾರು ಬೀಡಿ ಪಟಾಕಿಗಳನ್ನು ಕಟ್ಟಿ ಜೋಡಿಸುವ ಪಟಾಕಿ ಇತ್ತಾದರೂ ಅದೂ ನಮ್ಮ ಬಜೆಟ್‌ಗಿಂತ ಮೇಲಿನದಾಗಿತ್ತು. ಚುನಾವಣೆಯ ವಿಜಯೋತ್ಸವದ ಸಂದರ್ಭಗಳಲ್ಲಿ ಪಕ್ಷಗಳ ಕಾರ್ಯಕರ್ತರು ಮಾಲೆ ಪಟಾಕಿ ಸಿಡಿಸುತ್ತಿದ್ದರು.ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಯಿಸಿದ ತಂಡದವರೂ ಮಾಲೆ ಪಟಾಕಿ ಸಿಡಿಸುತ್ತಿದ್ದರು.ಅವರು ಮಾಲೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಅಲ್ಲಿಂದ ತೆರಳಿದ ಬಳಿಕ ಮಾಲೆಯ ಮಧ್ಯದಲ್ಲಿ ಸಿಡಿಯದೇ ಉಳಿದ ಪಟಾಕಿಗಾಗಿ ನಾವು ಹುಡುಕುತ್ತಿದ್ದೆವು. ಸಾಮಾನ್ಯವಾಗಿ ಒಂದು ಮಾಲೆಯಲ್ಲಿ ಒಂದೆರಡಾದರೂ ಸಿಡಿಯದೇ ಉಳಿದ ಪಟಾಕಿ ಇರುತ್ತಿತ್ತು. ಅವನ್ನು ಖುಷಿಯಿಂದ ಸಿಡಿಸುತ್ತಿದ್ದೆವು.

ಒಮ್ಮೆ ಬೀಡಿ ಪಟಾಕಿಗೆ ಬೆಂಕಿ ಕೊಟ್ಟು ಇನ್ನೇನು ಎಸೆಯಬೇಕೆನ್ನುವಷ್ಟರಲ್ಲಿ ನನ್ನ ಕೈಯಲ್ಲೇ ಪಟಾಕಿ ಸಿಡಿದಿತ್ತು. ಆಗ ಅದರ ಸದ್ದು ಕಿವಿ ತಮಟೆಗೆ ಬಡಿದು ತುಂಬಾ ಹೊತ್ತಿನವರೆಗೆ ಕಿವಿಯೊಳಗೆ ಗುಂಯ್ ಗುಂಯ್ ಎಂದು ಸದ್ದಾಗಿತ್ತು. ಆ ನಂತರ ಮುಂದೆಂದೂ ಬೀಡಿ ಪಟಾಕಿಗೆ ಬೆಂಕಿ ಹಚ್ಚಿ ಎಸೆಯುವ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ.

ದೀಪಾವಳಿಯ ಸೀಸನ್‌ನಲ್ಲಿ ಒಮ್ಮೆ ಕಾಲೇಜಿಗೆ ಬೀಡಿ ಪಟಾಕಿ ಮತ್ತು ಒಂದು ಊದುಬತ್ತಿ ಕೊಂಡೊಯ್ದಿದ್ದೆ. ಇಂಟರ್ ವೆಲ್ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ತರಗತಿಗೆ ಹೋದ ಬಳಿಕ ಊದು ಬತ್ತಿಯ ತುದಿಗೆ ಬೆಂಕಿ ಹಚ್ಚಿ ಅದರ ನಡು ಭಾಗಕ್ಕೆ ಬೀಡಿ ಪಟಾಕಿ ಕಟ್ಟಿ ಪ್ರಿನ್ಸಿಪಾಲ್ ಕ್ಯಾಬಿನ್ ಬಳಿ ಇಟ್ಟು ತರಗತಿಗೆ ಹೋಗಿದ್ದೆ. ತರಗತಿ ಪ್ರಾರಂಭವಾದ ಮೇಲೆ ಲೆಕ್ಚರರ್ ಗಳ ಮಾತು ಬಿಟ್ಟರೆ ಬೇರ್ಯಾವ ಸದ್ದೂ ಕೇಳದಷ್ಟು ಮೌನ ಕಾಲೇಜಿನ ತುಂಬಾ ಆವರಿಸುತ್ತಿತ್ತು. ತರಗತಿ ಪ್ರಾರಂಭವಾಗಿ ಕೆಲವು ನಿಮಿಷಗಳಲ್ಲಿ ಡಬ್ಬೆಂದು ಪಟಾಕಿ ಸಿಡಿಯಿತು. ಆ ಸದ್ದಿಗೆ ಲೆಕ್ಚರರ್‌ಗಳು, ಮತ್ತು ಕಾಲೇಜಿನ ಬೇರೆ ಬೇರೆ ತರಗತಿಯ ವಿದ್ಯಾರ್ಥಿಗಳೆಲ್ಲಾ ತರಗತಿಯಿಂದ ಹೊರಗೆ ಓಡಿ ಬಂದರು. ಅದೇನೆಂದು ಸುಮಾರು ಹೊತ್ತಿನವರೆಗೆ ತಿಳಿಯದ್ದರಿಂದ ಇಡೀ ಕಾಲೇಜಿನ ಆ ಪೀರಿಯೆಡ್ ಹಾಳಾಗಿತ್ತು. ನಾನು ಅದನ್ನೇ ಬಯಸಿದ್ದೆ. ಹೀಗೆ ಪಟಾಕಿ ಪುರಾಣ ಬರೆದಷ್ಟೂ ಮುಗಿಯದು.

***

ನಾನು ಬಂಟ್ವಾಳ ತಾಲೂಕಿನ ಪಜೀರು ಗ್ರಾಮದವನಾದರೂ ನನ್ನ ಶಾಲಾದಿನಗಳನ್ನು ಕಳೆದಿದ್ದು ಉಳ್ಳಾಲದ ಮಂಚಿಲ ಎಂಬಲ್ಲಿನ ನನ್ನ ಅಜ್ಜಿ ಮನೆಯಲ್ಲಿ. ನಮಗೆ ತೊಕ್ಕೊಟ್ಟು ಪೇಟೆ ಹತ್ತಿರವೇ ಇತ್ತು.

ದೀಪಾವಳಿಯೆಂದರೆ ನಾನು ಮತ್ತು ನನ್ನೂರಿನ ಸಮಕಾಲೀನ ಹುಡುಗರಿಗೆ ಲಡ್ಡು ತಿನ್ನುವ ಹಬ್ಬವೂ ಆಗಿತ್ತು. ಆಗೆಲ್ಲಾ ನಾವು ಅಂಗಡಿ ಅಂಗಡಿಗೆ ಹೋಗಿ ಲಡ್ಡಿಗಾಗಿ ಎಂಜಲು ಸುರಿಸುತ್ತಾ ಕಾಯುತ್ತಿದ್ದೆವು. ಸುಮ್ಮನೆ ಅಂಗಡಿ ಬಾಗಿಲ ಬಳಿ ನಿಂತರೆ ಅಂಗಡಿಯವರು ಓಡಿಸುತ್ತಿದ್ದರು. ಅದಕ್ಕಾಗಿ ನಮ್ಮ ಪಟಾಲಂನ ಯಾರದ್ದಾದರೂ ಕೈಯಲ್ಲಿ ಹತ್ತು ಪೈಸೆಯಿದ್ದರೆ ಒಂದು ಮಿಠಾಯಿಗಾಗಿ ನಮ್ಮ ಇಡೀ ಪಟಾಲಂ ಅಂಗಡಿಗಳಿಗೆ ಹೋಗುತ್ತಿತ್ತು. ಕೆಲವೊಂದು ಅಂಗಡಿಯವರು ಹೋದ ಹುಡುಗರಿಗೆಲ್ಲಾ ಲಡ್ಡು ಕೊಡುತ್ತಿದ್ದರೆ, ಕೆಲವರು ಏನೂ ಕೊಡುತ್ತಿರಲಿಲ್ಲ. ಆದರೆ ನಾವು ಬಿಡಬೇಕಲ್ಲಾ.... ಬಾಯಿ ಬಿಟ್ಟು ಕೇಳುತ್ತಿದ್ದೆವು. ಹೆಚ್ಚಿನವರು ನಮ್ಮನ್ನು ಓಡಿಸುತ್ತಿದ್ದರೆ ಕೆಲವರು ಆಗ ಐದು ಪೈಸೆಗೆ ಸಿಗುತ್ತಿದ್ದ ಕಿತ್ತಳೆ ಹಣ್ಣಿನ ಎಸಳಿನಂತಹ ಮಿಠಾಯಿ ಕೊಟ್ಟು ಸಾಗ ಹಾಕುತ್ತಿದ್ದರು.

ಆಗ ನಾವು ಎಂತಹ ಕಂಜೂಸ್ ಮಾರ್ರೆ ಎಂದು ಜರಿದು ನಮ್ಮ ಸವಾರಿ ಮುಂದುವರಿಸುತ್ತಿದ್ದೆವು. ನಾವು ನಾಲ್ಕೈದು ಹುಡುಗರು ದೀಪಾವಳಿ ಸೀಸನ್ ನಲ್ಲಿ ಲಡ್ಡು ಬೇಟೆಗಾಗಿ ಒಟ್ಟೊಟ್ಟಿಗೆ ಹೋಗುತ್ತಿದ್ದೆವು. ನಾಲ್ಕಾನೆ ದುಡ್ಡು ಒಬ್ಬೊಬ್ಬರ ಕೈಯಲ್ಲಿದ್ದರೆ ಸುಮಾರು ಹತ್ತು ಅಂಗಡಿಗೆ ಹೋಗಲು ಬೇಕಾದಷ್ಟು ಅದನ್ನು ಚಿಲ್ಲರೆ ಮಾಡಿಡುತ್ತಿದ್ದೆವು.ನಮ್ಮ ಪಟಾಲಂನ ಒಬ್ಬ ಹುಡುಗ ಒಂದು ಅಂಗಡಿಯಿಂದ ಮಿಠಾಯಿ ಖರೀದಿಸುವುದೆಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿಯೇ ಹೋಗುತ್ತಿದ್ದೆವು. ತೊಕ್ಕೊಟ್ಟು ಪೇಟೆ ದೊಡ್ಡದಿದ್ದುದರಿಂದ ಲಡ್ಡು ಬೇಟೆಗಾಗಿ ಕಡಿಮೆಯೆಂದರೂ ಹತ್ತು ಅಂಗಡಿಗೆ ನಮ್ಮ ಪಟಾಲಂ ಎಡತಾಕುತ್ತಿತ್ತು.ಒಬ್ಬೊಬ್ಬ ಎರಡೆರಡು ಅಂಗಡಿಗಳಲ್ಲಿ ಮಿಠಾಯಿ ಖರೀದಿಸಿದರೆ ನಮ್ಮ ಇಡೀ ಪಟಾಲಂಗೆ ಹತ್ತು ಅಂಗಡಿಗಳಿಗೆ ಹೋಗಲು ಹೇಗೆ ಸಾಧ್ಯ ಎಂಬ ಲೆಕ್ಕಾಚಾರವನ್ನು ನಾವು ಮೊದಲೇ ಹಾಕುತ್ತಿದ್ದೆವು.

ಹಾಗೂ ಹೀಗೂ ಏನಿಲ್ಲವೆಂದರೂ ಮೂರು ಅಂಗಡಿಗಳಿಂದಾದರೂ ಲಡ್ಡು ಶಿಕಾರಿ ಮಾಡುವಲ್ಲಿ ಯಶಸ್ಸು ಕಾಣುತ್ತಿದ್ದೆವು. ನಾವೆಲ್ಲಾ ಬ್ಯಾರಿ ಹುಡುಗರೇ ಆದುದರಿಂದ ನಮ್ಮನ್ನು ಮಂಗ ಮಾಡಲು ಕೆಲವು ಅಂಗಡಿಗಳವರಿಗೆ ಸಾಧ್ಯವಾಗುತ್ತಿತ್ತು. ಅದು ಹೇಗೆಂದರೆ ಟೈಲರ್ ಅಂಗಡಿಗಳಲ್ಲಿ, ಗ್ಯಾರೇಜ್‌ಗಳಲ್ಲಿ ಆಯುಧ ಪೂಜೆಯಿದ್ದರೆ, ಜಿನಸು ಅಂಗಡಿ ಮತ್ತಿತರ ಅಂಗಡಿಗಳಲ್ಲಿ ಅಂಗಡಿ ಪೂಜೆ ಇರುತ್ತಿತ್ತು.ಆಯುಧ ಪೂಜೆಯ ದಿನ ಹೋದರೆ ನಾವು ಅಂಗಡಿ ಪೂಜೆ ಮಾಡುವುದು ಎನ್ನುತ್ತಿದ್ದರು. ಅಂಗಡಿ ಪೂಜೆಯ ದಿನ ಹೋದರೆ ನಾವು ಮೊನ್ನೆಯೇ ಆಯುಧ ಪೂಜೆ ಮಾಡಿದ್ದೆವು ಎಂದು ಸಾಗ ಹಾಕುತ್ತಿದ್ದರು.ನಾವು ಮೊನ್ನೆ ಬಂದಾಗ ಅಂಗಡಿ ಪೂಜೆ ದಿನ ಬನ್ನಿ ಎಂದಿದ್ದಿರಲ್ಲಾ ಎಂದು ಪ್ರಶ್ನಿಸಿದರೆ ಅದು ಮೊನ್ನೆ ತುಂಬಾ ಜನ ಬಂದು ಆಯುಧ ಪೂಜೆಯ ಸಿಹಿ ಕೇಳಿದ್ದರು.ಅದಕ್ಕೆ ನಾವು ಮತ್ತೆ ಸಂಜೆ ಆಯುಧ ಪೂಜೆ ಮಾಡಿದ್ದು ಎಂದು ನಮ್ಮನ್ನು ಸಾಗ ಹಾಕುತ್ತಿದ್ದರು. ನಾವು ನಿರಾಶೆಯಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದಿರುಗುತ್ತಿದ್ದೆವು.

ನಾವು ಪೇಟೆಯಿಂದ ಹಿಂದಿರುಗುವಾಗ ಯಾರೆಲ್ಲಾ ಪೂರ್ತಿ ಕಂಜೂಸ್, ಯಾರೆಲ್ಲಾ ಸ್ವಲ್ಪ ಕಂಜೂಸ್, ಯಾರೆಲ್ಲಾ ಅರ್ಧ ಕಂಜೂಸ್ ಮತ್ತು ಯಾರೆಲ್ಲಾ ಒಳ್ಳೆಯವರು ಎಂದು ಮಾತನಾಡುತ್ತಾ ಬರುತ್ತಿದ್ದೆವು. ಲಡ್ಡು ಕೊಟ್ಟವ ಒಳ್ಳೆಯವ, ಚಾಕಲೇಟ್ ಕೊಟ್ಟವ ಸ್ವಲ್ಪ ಕಂಜೂಸ್, ಐದು ಪೈಸೆಯ ಮಿಠಾಯಿ ಕೊಟ್ಟವ ಅರ್ಧ ಕಂಜೂಸ್ ಮತ್ತು ಏನೂ ಕೊಡದವ ಪೂರ್ತಿ ಕಂಜೂಸ್ ಎಂಬುವುದು ನಮ್ಮ ಮೌಲ್ಯಮಾಪನವಾಗಿತ್ತು.

ಕಣ್ಮರೆಯಾದ ಇಂತಹ ಸುಂದರ ಬಾಲ್ಯ, ದೀಪಾವಳಿ ನಮ್ಮ ಹೊಸ ತಲೆಮಾರಿಗೆ ಸಿಗಬಹುದೇ...?

ಈ ತಲೆಮಾರಿನ ಮಕ್ಕಳು ನಮ್ಮಂತೆ ಲಡ್ಡಿಗಾಗಿ ಬೀದಿ ಸುತ್ತಲು ಸಾಧ್ಯವೇ....?

ಯಾಕೋ ನನಗೆ ನನ್ನ ಬಾಲ್ಯದ ನೆನಪುಗಳನ್ನು ಮೊಗೆಮೊಗೆದು ಕೊಡದ ದೀಪಾವಳಿಯೇ ಇಲ್ಲ.

share
ಇಸ್ಮತ್ ಫಜೀರ್
ಇಸ್ಮತ್ ಫಜೀರ್
Next Story
X