ಕಾನ್‌ಸ್ಟೇಬಲ್ ಹತ್ಯೆ: ಬಿಎಸ್‌ಎಫ್‌ನಿಂದ ಬಿಜಿಬಿ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಲ್ಲಿ, ಅ.19: ಎರಡು ದಿನಗಳ ಹಿಂದೆ ತನ್ನ ಯೋಧನೋರ್ವನನ್ನು ಹತ್ಯೆ ಮಾಡಿದ್ದ ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶ (ಬಿಜಿಬಿ) ವಿರುದ್ಧ ಬಿಎಸ್‌ಎಫ್ ಶನಿವಾರ ಎಫ್‌ಐಆರ್ ದಾಖಲಿಸಿದೆ.
ಬಿಎಸ್‌ಎಫ್ ದೂರಿನಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು,ತನಿಖೆ ನಡೆಯುತ್ತಿದೆ ಎಂದು ಮುರ್ಷಿದಾಬಾದ್ ಎಸ್‌ಪಿ ಮುಕೇಶ ಕುಮಾರ ತಿಳಿಸಿದ್ದಾರೆ.
ಯಾಂತ್ರಿಕ ದೋಣಿಯಲ್ಲಿ ಬಾಂಗ್ಲಾದೇಶದ ಜಲಪ್ರದೇಶವನ್ನು ಅತಿಕ್ರಮಿಸಿದ್ದ ಮೂವರು ಭಾರತೀಯ ಮೀನುಗಾರರನ್ನು ವಶಕ್ಕೆ ತೆಗೆದುಕೊಳ್ಳಲು ತನ್ನ ಗಸ್ತುತಂಡವು ಪ್ರಯತ್ನಿಸಿದ್ದು,ಅವರ ಪೈಕಿ ಇಬ್ಬರು ಪರಾರಿಯಾಗಿದ್ದರು. ಈ ವೇಳೆ ಸಮವಸ್ತ್ರದಲ್ಲಿದ್ದ ಓರ್ವ ಸೇರಿದಂತೆ ನಾಲ್ವರು ಶಸ್ತ್ರಸಜ್ಜಿತ ಬಿಎಸ್‌ಎಫ್ ಯೋಧರು ಮೀನುಗಾರರನ್ನು ಬಿಡಿಸಿಕೊಳ್ಳಲು ಸ್ಪೀಡ್ ಬೋಟ್‌ನಲ್ಲಿ ಬಾಂಗ್ಲಾದೇಶದ ಪ್ರದೇಶವನ್ನು ಪ್ರವೇಶಿಸಿದ್ದರು. ಈ ವೇಳೆ ತನ್ನ ಗಸ್ತು ತಂಡವು ಆತ್ಮರಕ್ಷಣೆಗಾಗಿ ಅವರ ಮೇಲೆ ಗುಂಡುಗಳನ್ನು ಹಾರಿಸಿತ್ತು ಎಂದು ಬಿಜಿಬಿ ಗುರುವಾರ ಹೇಳಿಕೆಯಲ್ಲಿ ತಿಳಿಸಿತ್ತು.
ಬಿಎಸ್‌ಎಫ್ ಯೋಧರು ಗುಂಡು ಹಾರಿಸಿದ್ದರು ಎನ್ನುವುದು ಶುದ್ಧಸುಳ್ಳು ಎಂದು ಶನಿವಾರ ಹೇಳಿದ ಪಡೆಯ ಹಿರಿಯ ಅಧಿಕಾರಿಯೋರ್ವರು,ಘಟನೆಯ ಬಗ್ಗೆ ಬಿಎಸ್‌ಎಫ್ ವಿಚಾರಣೆಗೆ ಆದೇಶಿಸಿದೆಯಾದರೂ ನಿಯಮಗಳಂತೆ ಪೊಲೀಸ್ ದೂರನ್ನು ದಾಖಲಿಸಲಾಗಿದೆ ಎಂದರು.
ಬಿಎಸ್‌ಎಫ್ ಹೇಳಿಕೆಯಂತೆ ಬಿಜಿಬಿ ಇಬ್ಬರು ಮೀನುಗಾರರನ್ನು ಬಿಡುಗಡೆ ಮಾಡಿ,ಇನ್ನೋರ್ವ ತನ್ನ ವಶದಲ್ಲಿರುವುದಾಗಿ ಮಾಹಿತಿ ನೀಡಿತ್ತು. ಸಮಸ್ಯೆಯನ್ನು ಬಗೆಹರಿಸಲು ಆರು ಬಿಎಸ್‌ಎಫ್ ಯೋಧರ ತಂಡ ಮೋಟರ್ ಬೋಟ್‌ನಲ್ಲಿ ತೆರಳಿತ್ತು. ಈ ವೇಳೆ ಸೈಯದ್ ಎಂದಷ್ಟೇ ಗುರುತಿಸಲಾಗಿರುವ ಬಿಜಿಬಿ ಸೈನಿಕ ಗುಂಡು ಹಾರಿಸಿದ್ದು, ಬಿಎಸ್‌ಎಫ್ ಕಾನ್‌ಸ್ಟೇಬಲ್ ವಿಜಯಭಾನ್ ಸಿಂಗ್ ಮೃತಪಟ್ಟಿದ್ದರು ಮತ್ತು ಇತರ ಇಬ್ಬರು ಗಾಯಗೊಂಡಿದ್ದರು.
ತನ್ಮಧ್ಯೆ,ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಉಭಯ ದೇಶಗಳು ಪ್ರಯತ್ನಿಸುತ್ತಿವೆ. ಇದೊಂದು ದುರದೃಷ್ಟಕರ ಘಟನೆಯಾಗಿದ್ದು,ಇದು ಉಭಯ ದೇಶಗಳ ನಡುವಿನ ಸೌಹಾರ್ದ ಸಂಬಂಧಕ್ಕೆ ಹಾನಿಯನ್ನುಂಟು ಮಾಡಬಾರದು. ಎರಡೂ ಪಡೆಗಳ ನಡುವೆ ಸಂಘರ್ಷಕ್ಕೆ ಕಾರಣಗಳನ್ನು ಗುರುತಿಸಿ ಅವುಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ನಾವು ಸಜ್ಜಾಗಿದ್ದೇವೆ ಎಂದು ಬಾಂಗ್ಲಾದೇಶದ ಗೃಹಸಚಿವ ಅಸಾದುಝ್ಝಮಾನ್ ಖಾನ್ ಕಮಾಲ್ ಅವರು ಶುಕ್ರವಾರ ಢಾಕಾದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.







