ಲೆಬನಾನ್: ಪರಿಹಾರಕ್ಕಾಗಿ ಸರಕಾರಕ್ಕೆ 72 ಗಂಟೆ ಗಡುವು ನೀಡಿದ ಪ್ರಧಾನಿ
ಬೈರೂತ್ (ಲೆಬನಾನ್), ಅ. 19: ದಿನೇ ದಿನೇ ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಲೆಬನಾನ್ ಪ್ರಧಾನಿ ಸಅದ್ ಅಲ್ ದೀನ್ ರಫೀಕ್ ಅಲ್ ಹರೀರಿ ತನ್ನ ಸರಕಾರಕ್ಕೆ ಶುಕ್ರವಾರ 72 ಗಂಟೆಗಳ ಗಡುವು ನೀಡಿದ್ದಾರೆ.
ದೇಶದ ಆಡಳಿತಾರೂಢ ರಾಜಕೀಯ ನಾಯಕರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ದಿನೇ ದಿನೇ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಅವರು, “ನನ್ನ ರಾಷ್ಟ್ರೀಯ ಏಕತಾ ಸರಕಾರದಲ್ಲಿರುವ ರಾಜಕಾರಣಿಗಳು ಆರ್ಥಿಕ ಸುಧಾರಣೆಗಳನ್ನು ತಡೆಹಿಡಿದಿರುವುದೇ ಇಂದಿನ ಪರಿಸ್ಥಿತಿಗೆ ಕಾರಣ” ಎಂದು ಅವರು ದೂರಿದರು.
ಅವರ ಭಾಷಣದ ವೇಳೆ, ನೂರಾರು ಪ್ರತಿಭಟನಕಾರರು ಅವರ ಕಚೇರಿಯ ಹೊರಗೆ ಜಮಾಯಿಸಿದ್ದರು.
ಹರೀರಿಯ ರಾಷ್ಟ್ರೀಯ ಏಕತಾ ಸರಕಾರದಲ್ಲಿ ಇರಾನ್ ಬೆಂಬಲಿತ ಹಿಝ್ಬುಲ್ಲಾ ಮತ್ತು ಎದುರಾಳಿ ರಾಜಕೀಯ ಪಕ್ಷಗಳು ಇವೆ.
‘‘ಜನರ ನೋವನ್ನು ನಾನೂ ಅನುಭವಿಸುತ್ತಿದ್ದೇನೆ. ನನ್ನ ದೇಶವು ಅಭೂತಪೂರ್ವ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎನ್ನುವುದು ನನಗೆ ಗೊತ್ತಿದೆ’’ ಎಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಹರೀರಿ ಹೇಳಿದರು.
72 ಗಂಟೆಗಳ ಗಡುವಿನೊಳಗೆ ತನ್ನ ಸರಕಾರ ಸ್ಪಷ್ಟ ಹಾಗೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ತಾನು ರಾಜೀನಾಮೆ ನೀಡುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಆದರೆ, ಅವರು ಅದನ್ನು ಸ್ಪಷ್ಟವಾಗಿ ಹೇಳಲಿಲ್ಲ.
ಈ ಸರಕಾರ ಪತನಗೊಳ್ಳಬೇಕು ಎಂದ ಪ್ರತಿಭಟನಕಾರರು
ಲೆಬನಾನ್‌ನ ಕುಸಿಯುತ್ತಿರುವ ಆರ್ಥಿಕತೆಯ ವಿರುದ್ಧ ಹಲವು ದಿನಗಳಿಂದ ಸಾವಿರಾರು ಜನರು ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಹರೀರಿ, ಅಧ್ಯಕ್ಷ ಮೈಕಲ್ ಅವುನ್ ಮತ್ತು ಸಂಸತ್ತಿನ ಸ್ಪೀಕರ್ ನಬಿಹ್ ಬೆರಿ ಸೇರಿದಂತೆ ಎಲ್ಲ ರಾಜಕೀಯಹ ನಾಯಕರು ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುವುದು ಪ್ರತಿಭಟನಕಾರರ ಬೇಡಿಕೆಯಾಗಿದೆ.
‘‘ನಮ್ಮ ಬೇಡಿಕೆ ಒಂದೇ, ನಮ್ಮ ಉದ್ದೇಶ ಒಂದೇ: ಈ ಸರಕಾರ ಪತನಗೊಳ್ಳಬೇಕು’’ ಎಂಬುದಾಗಿ ಶುಕ್ರವಾರ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.