ಬ್ರೆಕ್ಸಿಟ್ ಒಪ್ಪಂದ ನಿರ್ಧಾರವನ್ನು ಮುಂದೂಡಿದ ಸಂಸದರು
ಪ್ರಧಾನಿ ಜಾನ್ಸನ್‌ಗೆ ಭಾರೀ ಹಿನ್ನಡೆ
ಲಂಡನ್, ಅ. 19: ಪ್ರಧಾನಿ ಬೊರಿಸ್ ಜಾನ್ಸನ್‌ರ ಬ್ರೆಕ್ಸಿಟ್ ಒಪ್ಪಂದದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದೂಡುವ ನಿರ್ಣಯದ ಪರವಾಗಿ ಬ್ರಿಟನ್ ಸಂಸದರು ಶನಿವಾರ ಮತಹಾಕಿದರು. ಒಪ್ಪಂದದ ಅಂಶಗಳ ಬಗ್ಗೆ ಅಧ್ಯಯನ ಮಾಡಲು ತಮಗೆ ಹೆಚ್ಚಿನ ಸಮಯ ಬೇಕು ಎಂದು ಅವರು ಹೇಳಿದರು.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಲು ಅಕ್ಟೋಬರ್ 31 ಕೊನೆಯ ದಿನವಾಗಿದೆ.
ಒಪ್ಪಂದದಲ್ಲಿ ಒಂದು ತಿದ್ದುಪಡಿಯಾಗಬೇಕು ಎಂಬುದಾಗಿ ಸಂಸದರು ಒತ್ತಾಯಿಸಿದ್ದಾರೆ. ಇದಕ್ಕೆ ಸಂಸತ್ತು ಅಂಗೀಕಾರ ನೀಡಿದರೆ, ಬ್ರೆಕ್ಸಿಟ್ ಗಡುವನ್ನು ಮುಂದಿನ ವರ್ಷದ ಜನವರಿಗೆ ವಿಸ್ತರಿಸುವಂತೆ ಐರೋಪ್ಯ ಒಕ್ಕೂಟವನ್ನು ಕೋರುವುದು ಜಾನ್ಸನ್‌ಗೆ ಅನಿವಾರ್ಯವಾಗುತ್ತದೆ.
ಆದರೆ, ಇದನ್ನು ಜಾನ್ಸನ್ ಧಿಕ್ಕರಿಸಿದ್ದಾರೆ. ‘‘ಈ ಹೊಸ ಒಪ್ಪಂದದೊಂದಿಗೆ ಅಕ್ಟೋಬರ್ 31ರೊಳಗೆ ಐರೋಪ್ಯ ಒಕ್ಕೂಟದಿಂದ ಹೊರಬರುವುದು ಬ್ರಿಟನ್ ಮತ್ತು ಇಡೀ ಯುರೋಪ್‌ಗೆ ಒಳಿತು’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗಡುವು ವಿಸ್ತರಣೆ ಕೋರುವುದಿಲ್ಲ: ಜಾನ್ಸನ್
‘‘ಬ್ರೆಕ್ಸಿಟ್ ಗಡುವನ್ನು ವಿಸ್ತರಿಸುವಂತೆ ನಾನು ಐರೋಪ್ಯ ಒಕ್ಕೂಟವನ್ನು ಕೋರುವುದಿಲ್ಲ. ಹೀಗೆ ಮಾಡುವಂತೆ ಕಾನೂನು ನನ್ನನ್ನು ಬಲವಂತಪಡಿಸುವುದೂ ಇಲ್ಲ’’ ಎಂದು ಬೊರಿಸ್ ಜಾನ್ಸನ್ ಹೇಳಿದರು.
ಸಂಸತ್ ಹೊರಗೆ ಸಾವಿರಾರು ಮಂದಿಯಿಂದ ಬ್ರೆಕ್ಸಿಟ್ ವಿರೋಧಿ ಪ್ರದರ್ಶನ
ಶನಿವಾರ ಬ್ರಿಟನ್ ಸಂಸದರು ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದಕ್ಕೆ ಸಂಬಂಧಿಸಿದ ಬ್ರೆಕ್ಸಿಟ್ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸುತ್ತಿರುವಂತೆಯೇ, ಐರೋಪ್ಯ ಒಕ್ಕೂಟದಲ್ಲೇ ಬ್ರಿಟನ್ ಉಳಿಯಬೇಕೆಂದು ಬಯಸುವ ಸಾವಿರಾರು ಮಂದಿ ಸಂಸತ್ತಿನ ಹೊರಗೆ ಜಮಾಯಿಸಿದರು.
ಬ್ರಿಟನ್ ಐರೋಪ್ಯ ಒಕ್ಕೂಟದಲ್ಲೇ ಉಳಿಯಬೇಕೆಂದು ಒತ್ತಾಯಿಸುವ ಫಲಕಗಳನ್ನು ಅವರು ಪ್ರದರ್ಶಿಸಿದರು ಹಾಗೂ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕೇ ಬೇಡವೇ ಎಂಬ ಬಗ್ಗೆ ಎರಡನೇ ಜನಮತಗಣನೆ ನಡೆಯಬೇಕೆಂದು ಅವರು ಒತ್ತಾಯಿಸಿದರು.
ಮಧ್ಯ ಲಂಡನ್‌ನ ಹೈಡ್ ಪಾರ್ಕ್ ಸಮೀಪ ಒಟ್ಟು ಸೇರಿದ ಪ್ರತಿಭಟನಕಾರರು ಬಳಿಕ ಸಂಸತ್ತು ಇರುವ ವೆಸ್ಟ್‌ಮಿನ್‌ಸ್ಟರ್‌ನತ್ತ ಮೆರವಣಿಗೆಯಲ್ಲಿ ತೆರಳಿದರು.