ಇಮ್ರಾನ್ ಖಾನ್ ಪದಚ್ಯುತಿ ಆಗ್ರಹಿಸಿ ಅ.31ರಂದು ಪ್ರತಿಪಕ್ಷಗಳ ರ್ಯಾಲಿ
ಸೇನೆ ನಿಯೋಜನೆಗೆ ಪಾಕ್ ಸರಕಾರ ಚಿಂತನೆ
ಇಸ್ಲಾಮಾಬಾದ್, ಅ.19: ಇಮ್ರಾನ್ ಖಾನ್ ಸರಕಾರದ ಪದಚ್ಯುತಿಗೆ ಆಗ್ರಹಿಸಿ ಪ್ರತಿಪಕ್ಷಗಳು ಅಕ್ಟೋಬರ್ 31ರಂದು ಕರೆ ನೀಡಿರುವ ರ್ಯಾಲಿಯನ್ನು ವಿಫಲಗೊಳಿಸಲು ಪಾಕಿಸ್ತಾನ ಆಡಳಿತವು ಸೇನಾ ಪಡೆಗಳ ನೆರವು ಕೋರುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ. ಪಾಕಿಸ್ತಾನವು ಸಾರ್ವತ್ರಿಕ ಚುನಾವಣೆಗಳಲ್ಲಿ ವಂಚನೆಯನ್ನು ಎಸಗಿ ಅಧಿಕಾರಕ್ಕೇರಿರುವುದಾಗಿ ಆರೋಪಿಸಿ ಪ್ರತಿಕ್ಷಗಳು ರ್ಯಾಲಿಗೆ ಕರೆ ನೀಡಿವೆ.
ಇಮ್ರಾನ್ ಖಾನ್ ಸರಕಾರದ ವಿರುದ್ಧ ತಾನು ನವೆಂಬರ್ 21ರಂದು ಇಸ್ಲಾಮಾಬಾದ್ನಲ್ಲಿ ಬೃಹತ್ ರ್ಯಾಲಿ ನಡೆಸುವುದಾಗಿ ಜಮಿಯತ್ ಉಲಮಾ ಇಸ್ಲಾಮ್ನ ವರಿಷ್ಠ ಮೌಲಾನಾ ಫಾಝಿಲ್ ಅವರು ಘೋಷಿಸಿದ್ದರು. ಪಿಎಂಎಲ್-ಎನ್, ಪಿಪಿಪಿ, ಎಎನ್ಪಿ ಹಾಗೂ ಪಿಕೆಎಂಎಪಿ ಪಕ್ಷಗಳು ಕೂಡಾ ಜಮೀಯತ್ ಉಲಮಾ ಇಸ್ಲಾಮ್ನ ಆಝಾದಿ ಮಾರ್ಚ್ಗೆ ಬೆಂಬಲ ಘೋಷಿಸಿವೆ.
ಇಮ್ರಾನ್ ಖಾನ್ ನಿವಾಸದಲ್ಲಿ ಶನಿವಾರ ನಡೆದ ಸಭೆಯಲ್ಲಿ ದೇಶದ ಕಾನೂನು ಮತ್ತು ಶಿಸ್ತು ಪರಿಸ್ಥಿತಿ ಹಾಗೂ ಪ್ರತಿಪಕ್ಷಗಳ ರ್ಯಾಲಿಯನ್ನು ತಡೆಗಟ್ಟಲು ಇರುವ ವಿವಿಧ ಆಯ್ಕೆಗಳ ಬಗ್ಗೆ ಚರ್ಚಿಸಲಾಯಿತು.
ಸರಕಾರಿ ಕಚೇರಿಗಳು ಹಾಗೂ ವಿದೇಶಿ ರಾಯಭಾರಿ ಕಚೇರಿಗಳ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು. ಫಾಝಿಲ್ ಸೇರಿದಂತೆ ವಿವಿಧ ಪ್ರತಿಪಕ್ಷಗಳ ನಾಯಕರ ಜೊತೆ ಮಾತುಕತೆಗಳನ್ನು ಕೂಡಾ ನಡೆಸಲು ಪಾಕ್ ಸರಕಾರ ನಿರ್ಧರಿಸಿದೆ. ಆದರೆ ಒಂದು ವೇಳೆ ಮಾತುಕತೆಗಳು ವಿಫಲವಾದಲ್ಲಿ, ಸರಕಾರಿ ಕಟ್ಟಡಗಳು ಹಾಗೂ ಮಹತ್ವದ ಘಟಕಗಳನ್ನು ರಕ್ಷಿಸಲು ಸೇನಾಪಡೆಗಳನ್ನು ನಿಯೋಜಿಸಲಾಗುವದುಉ ಎಂದು ಮೂಲಗಳು ತಿಳಿಸಿವೆ.