ಬೆಳ್ತಂಗಡಿ: ಶತ ಸಹಕಾರಿ ಸೌಧ ಉದ್ಘಾಟನೆ
ಬೆಳ್ತಂಗಡಿ: ಸಹಕಾರಿಗಳ ನಿರಂತರ ಪ್ರಯತ್ನದಿಂದಾಗಿ ಕೊಕ್ಕಡ ಸೇವಾಸಹಕಾರಿ ಬ್ಯಾಂಕ್ ಇಂದು ಉತ್ತಮ ಸಾಧನೆಯನ್ನು ಮಾಡಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ನೂರು ಸಂವತ್ಸರಗಳನ್ನು ಪೂರೈಸಿದ ಸಂದರ್ಭ ಶತ ಸಹಕಾರಿ ಸೌಧದ ಉದ್ಘಾಟನೆಯನ್ನು ನೆರವೇರಿಸಿ ಶತಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ, ಕರ್ನಾಟಕ ರಾಜ್ಯ ಬಿ.ಜೆ.ಪಿ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ ಭಾರತದ ಆರ್ಥಿಕ ವ್ಯವಸ್ಥೆ ಸುಸ್ಥಿತಿಯಲ್ಲಿದೆ ಎಂದು ನಮ್ಮ ಜಿಲ್ಲೆಯ ಹೆಮ್ಮೆಯ ಸಹಕಾರಿ ರಂಗದ ಬ್ಯಾಂಕುಗಳು ಇಂದು ತೋರಿಸಿಕೊಟ್ಟಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಈ ಶತಮಾನೋತ್ಸವ ಕಾರ್ಯಕ್ರಮವು ಮುಂದಿನ ನೂರು ವರ್ಷಗಳಲ್ಲಿ ಇನ್ನೂ ಹೆಚ್ಚಿನ ಲಾಭದಾಯಕ ನಡೆಗೆ ಒಂದು ಮುನ್ನುಡಿ ಬರೆಯುವಂತಾಗಲಿ ಎಂದರು.
ರಾಜ್ಯ ಸಹಕಾರ ಸಂಘಗಳ ಅಪರ ನಿಭಂದಕ ( ಪತ್ತು ) ಆರ್. ಶಿವಪ್ರಕಾಶ್ ಮಾತನಾಡಿ ಶುಭ ಹಾರೈಸಿದರು.
ಹುಟ್ಟೂರ ಸನ್ಮಾನವನ್ನು ಸ್ವೀಕರಿಸಿದ ಮಂಗಳೂರು ವಿಶ್ವ ವಿದ್ಯಾನಿಲಯ ಮಂಗಳ ಗಂಗೋತ್ರಿಯ ಮಾನ್ಯ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಹತ್ತೂರ ಸನ್ಮಾನಗಳಿಗಿಂತ ಹುಟ್ಟೂರ ಸನ್ಮಾನ ನನಗೆ ಅತೀವ ಸಂತಸವನ್ನ ನೀಡಿದೆ. ನನಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸದಾವಕಾಶವನ್ನು ನೀಡಿದ ಸಂಘದ ಸದಸ್ಯರುಗಳಿಗೆ ಮತ್ತು ಊರ ಸಹಕಾರಿ ಸಾಧಕರಿಗೆ ಶುಭ ಹಾರೈಸಿದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಮಾತನಾಡಿ ಶುಭ ಹಾರೈಸಿದರು. ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಿ. ನಾರಾಯಣ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶತಮಾನೋತ್ಸವದ ಸಂದರ್ಭ ಸಂಘದ ನೂರು ವರ್ಷಗಳ ಸಾಧನೆಗಳನ್ನು ಒಟ್ಟುಗೂಡಿಸಿ ಸಿದ್ಧಪಡಿಸಲಾಗುತ್ತಿರುವ ಸ್ಮರಣ ಸಂಚಿಕೆಯನ್ನು ಮಂಗಳೂರು ಸಂಸದರು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಬಿ. ನಿರಂಜನ ಭಾವಂತಬೆಟ್ಟು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂದಕ ಮಂಜುನಾಥ್ ಸಿಂಗ್,ಬೆಳ್ತಂಗಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಕನ್ಯಾ, ಶತಸಹಕಾರಿ ಸೌಧವನ್ನು ನಿರ್ಮಿಸಿದ ಎಸ್.ಎಲ್.ವಿ. ಕನ್ಸ್ಟ್ರಕ್ಷನ್ ನ ಅಭಿಯಂತರ ಸಂಪತ್ ರತ್ನ ರಾವ್ ಎಸ್, ಶತಮಾನೋತ್ಸವ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಶಬರಾಯ, ಸಂಘದ ನಿದೇಶಕರುಗಳಾದ ಸಿರಿಲ್ ಡಿ ಸೋಜ, ಮಹಾಬಲ ನಾೈಕ್ , ರಾಮಣ್ಣ ಗೌಡ , ಸುಂದರ ಪೂಜಾರಿ, ಜಯರಾಮ ಗೌಡ, ಭವಾನಿ, ಸರೋಜ, ಸೀತಮ್ಮ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಬೆಳ್ತಂಗಡಿ ತಾಲೂಕು ವಲಯ ಮೇಲ್ವೀಚಾರಕ ಸಿರಾಜುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಸಿದರು. ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭುವನೇಶ್ವರಿ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು.