ಭಾರತದೊಂದಿಗಿನ ಟಪಾಲು ವ್ಯವಸ್ಥೆ ಸ್ಥಗಿತಕ್ಕೆ ಪಾಕ್ ನಿರ್ಧಾರ

ಹೊಸದಿಲ್ಲಿ, ಅ.21: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಭಾರತ-ಪಾಕ್ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು ಇದೀಗ ಭಾರತದೊಂದಿಗಿನ ಟಪಾಲು ವ್ಯವಸ್ಥೆ(ಅಂಚೆವ್ಯವಸ್ಥೆ) ಸ್ಥಗಿತಗೊಳಿಸಲು ಪಾಕಿಸ್ತಾನ ನಿರ್ಧರಿಸಿದೆ.
ಪಾಕಿಸ್ತಾನ ಇದೇ ಮೊತ್ತಮೊದಲ ಬಾರಿಗೆ ಇಂತಹ ನಿರ್ಧಾರಕ್ಕೆ ಬಂದಿದೆ. ಆದರೆ ಉಭಯ ರಾಷ್ಟ್ರಗಳ ನಡುವಿನ ಕೊರಿಯರ್ ಸೇವೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಸುದ್ದಿಸಂಸ್ಥೆಯ ವರದಿ ಪ್ರಕಾರ, ಆಗಸ್ಟ್ 27ರಿಂದ ಈ ನಿರ್ಧಾರ ಜಾರಿಗೆ ಬಂದಿದೆ. ಭಾರತಕ್ಕೆ ಅಂಚೆಯ ಮೂಲಕ ಪತ್ರ ರವಾನಿಸುವ ಸೇವೆ ಸ್ಥಗಿತಕ್ಕೆ ಮತ್ತು ಭಾರತದಿಂದ ಬರುವ ಅಂಚೆಪತ್ರಗಳನ್ನು ಸ್ವೀಕರಿಸದಿರಲು ಪಾಕಿಸ್ತಾನ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ.
ಇದರಿಂದ ಭಾರತೀಯ ಅಂಚೆ ಪ್ರಾಧಿಕಾರವೂ ಅನಿವಾರ್ಯವಾಗಿ ಪಾಕಿಸ್ತಾನದ ವಿಳಾಸವುಳ್ಳ ಅಂಚೆಪತ್ರಗಳನ್ನು ತಡೆಹಿಡಿಯುವಂತಾಗಿದೆ. ಪಾಕಿಸ್ತಾನದ ವಿಳಾಸದ ಬಹುತೇಕ ಟಪಾಲುಗಳು ದಿಲ್ಲಿಯ ಅಂಚೆಕಚೇರಿಯಿಂದ ರವಾನೆಯಾಗುತ್ತದೆ. ಪಾಕ್‌ಗೆ ಕಳುಹಿಸುವ ಹೆಚ್ಚಿನ ಟಪಾಲು ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಿಂದ ಬರುತ್ತವೆ ಎಂದು ದಿಲ್ಲಿ ಅಂಚೆಕಚೇರಿಯ ವಿದೇಶಿ ಅಂಚೆಕಚೇರಿಗಳ ಅಧೀಕ್ಷಕ ಸತೀಶ್ ಕುಮಾರ್ ಹೇಳಿದ್ದಾರೆ.
ಪಾಕಿಸ್ತಾನದ ಲಾಹೋರ್‌ನಲ್ಲಿ ಗುರುಮುಖಿ ಲಿಪಿಯಲ್ಲಿ ಪ್ರಕಟವಾಗುವ ತ್ರೈಮಾಸಿಕ ಪತ್ರಿಕೆ ‘ಪಂಜಾಬ್ ದೆ ರಂಗ್’ ಭಾರತದಲ್ಲಿ ಪಂಜಾಬ್‌ನ ಜನತೆಗೆ ಅತ್ಯಂತ ಪ್ರಿಯವಾಗಿತ್ತು. ಈಗ ಈ ಪತ್ರಿಕೆ ಲಭ್ಯವಾಗುತ್ತಿಲ್ಲ ಎಂದು ಶಾಂತಿ ಕಾರ್ಯಕರ್ತ ಚಂಚಲ್ ಮನೋಹರ್ ಸಿಂಗ್ ಹೇಳಿದ್ದಾರೆ. ಉಭಯ ರಾಷ್ಟ್ರಗಳ ಮಧ್ಯೆ ಕೊರಿಯರ್ ಸೇವೆ ಮುಂದುವರಿದಿದ್ದರೂ ಸರಕಾರಿ ಮಟ್ಟದಲ್ಲಿ ನಡೆಯುವ ಸಂವಹನ ಪ್ರಕ್ರಿಯೆ ಕಡ್ಡಾಯವಾಗಿ ಟಪಾಲು ವ್ಯವಸ್ಥೆಯ ಮೂಲಕವೇ ನಡೆಯಬೇಕಿದೆ.
ನ್ಯಾಯಾಲಯಗಳಲ್ಲಿ ಈಮೇಲ್ ಪತ್ರಗಳನ್ನು ಪರಿಗಣಿಸುವುದಿಲ್ಲ ಮತ್ತು ಪವರ್ ಆಫ್ ಅಟಾರ್ನಿಯನ್ನು ಕೊರಿಯರ್ ಮೂಲಕ ಕಳಿಸುವಂತಿಲ್ಲ ಎಂದು ‘ಶಾಂತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಜನತೆಯ ವೇದಿಕೆ’ಯ ಸದಸ್ಯ ಜತಿನ್ ದೇಸಾಯಿ ಹೇಳಿದ್ದಾರೆ.







