‘ಟಿಪ್ತು ಜಯಂತಿ’ ರದ್ದು ವಿಚಾರ: ಶೀಘ್ರದಲ್ಲೇ ಸೂಕ್ತ ಕ್ರಮ- ಶಿಕ್ಷಣ ಸಚಿವ ಸುರೇಶ್ ಕುಮಾರ್
ಬೆಂಗಳೂರು, ಅ 21: ಟಿಪ್ಪು ಸುಲ್ತಾನ್ ಜಯಂತಿ ರದ್ದುಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಶಾಸಕ ಅಪ್ಪಚ್ಚು ರಂಜನ್ ಪತ್ರ ಬರೆದಿದ್ದು, ಇನ್ನೂ ಹಲವು ಮುಖಂಡರು ಜಯಂತಿ ಆಚರಿಸುವ ಔಚಿತ್ಯತೆಯನ್ನು ಪ್ರಶ್ನಿಸಿದ್ದಾರೆ. ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಡೈರಿ ಡೇ ಮತ್ತು ಬೆಂಗಳೂರು ಟ್ರಸ್ಟ್ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಸಂಚಾರಿ ತಾರಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಟಿಪ್ಪುಸುಲ್ತಾನ್ ಜಯಂತಿ ಯಾರಿಗೂ ಬೇಕಿರಲಿಲ್ಲ. ಟಿಪ್ಪು ಜಯಂತಿ ಆಚರಿಸಿ ಎಂದು ಯಾರೂ ಬೇಡಿಕೆ ಇಟ್ಟಿರಲಿಲ್ಲ. ಟಿಪ್ಪುಸುಲ್ತಾನ್ ಅವರಿಂದ ಯಾರೂ ಪ್ರೇರಣೆ ಪಡೆದಿರಲಿಲ್ಲ. ಆದರೆ, ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆಯನ್ನು ಹಿಂದಿನ ಸರಕಾರ ಏಕೆ ಆರಂಭಿಸಿತೋ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ರಾಜ್ಯ ಸರಕಾರಕ್ಕೆ ಬೇಕಿದ್ದರೆ ಸಂತ ಶಿಶುನಾಳ ಶರೀಫ್ ಅವರ ಜಯಂತಿ ಆಚರಿಸಬಹುದಿತ್ತು. ನಮ್ಮ ಮುಂದೆ ಬದುಕಿದ್ದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿ ಆಚರಿಸಿದ್ದರೆ ಹೆಚ್ಚು ಜನರಿಗೆ ಸಂತಸವಾಗುತ್ತಿತ್ತು. ಮಹತ್ವ ಬರುತ್ತಿತ್ತು ಎಂದು ಸುರೇಶ್ ಕುಮಾರ್ ಪ್ರತಿಪಾದಿಸಿದರು.
ಏಳನೆ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಸರಕಾರದ ತೀರ್ಮಾನ ವಿರುದ್ಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರಕಾರಕ್ಕೆ ಪತ್ರ ಬರೆದಿರುವ ವಿಚಾರ ತಮ್ಮ ಗಮನಕ್ಕೆ ಬಂದಿದೆ. ಶೀಘ್ರದಲ್ಲಿಯೆ ಸರಕಾರದಿಂದ ಆಯೋಗಕ್ಕೆ ಸಮಗ್ರ ಉತ್ತರ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಪ್ರತ್ಯೇಕ ದಳ ರಚಿಸುವ ಉದ್ದೇಶ ಸರಕಾರಕ್ಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ನಿರ್ದೇಶಕರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಇನ್ನಷ್ಟು ಬಿಗಿ ನಿಯಮಗಳನ್ನು ಅಳವಡಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.