ನೀರಾವರಿ ಯೋಜನೆಗಳ ಸಾಕಾರಕ್ಕೆ ಬದ್ಧ: ಡಾ.ಸಿ.ಎನ್.ಅಶ್ವಥ್ ನಾರಾಯಣ

ರಾಮನಗರ ಅ.21: ರಾಮನಗರ ಸೇರಿದಂತೆ ಇತರೆ ಭಾಗಗಳ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸುವುದು ನಮ್ಮ ಬದ್ಧತೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಗೀರಥ ಇದ್ದ ಹಾಗೆ, ಅವರ ನಾಯಕತ್ವದಲ್ಲಿ ನೀರಾವರಿ ವಿಷಯದಲ್ಲಿ ನ್ಯಾಯ ಸಿಗುವ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ.
ಸೋಮವಾರ ರಾಮನಗರ ಜಿಲ್ಲೆಯ ಮಾಗಡಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ಈ ದೇವಾಸ್ಥಾನಕ್ಕೆ ಅಕ್ರಮ ಕ್ರಷರ್‌ಗಳು ಕಂಟಕವಾಗಿದ್ದು, ದೇಗುಲದ ಗೋಪುರಕ್ಕೆ ಹಾನಿ ಆಗಿದೆ. ಹೀಗಾಗಿ ಅರಣ್ಯ ಪ್ರದೇಶದ ಒತ್ತುವರಿ ಬಗ್ಗೆ ಸರಕಾರ ಕ್ರಮ ಕೈಗೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕೃತಿಯನ್ನು ಕಾಪಾಡುವುದು ಸರಕಾರದ ಕರ್ತವ್ಯ. ಪರಿಸರ ರಕ್ಷಣೆ ನಮ್ಮ ಪ್ರಥಮ ಆದ್ಯತೆ. ಧರ್ಮಾಲಯಗಳು, ದೇವಾಲಯಗಳ ಜೀರ್ಣೋದ್ಧಾರ ಮಾಡಿ, ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದು ಜನತೆ ಹಾಗೂ ನಮ್ಮೆಲ್ಲರ ಇಚ್ಛೆ ಎಂದು ಅವರು ಹೇಳಿದರು.
ಕೆಂಪೇಗೌಡರೇ ಶಕ್ತಿ: ಈ ಕೋಟೆ ಕೆಂಪೇಗೌಡರ ಕೊಡುಗೆ. ಅವರೇ ಇಲ್ಲಿನ ಶಕ್ತಿ. ಮಾಗಡಿ ಕೆಂಪೇಗೌಡರ ಗೌರವ ಹೆಚ್ಚಿಸುವುದರಿಂದ ನಮ್ಮ ಗೌರವ ಹೆಚ್ಚುತ್ತದೆ. ಕೋಟೆಯ ಸಂಪೂರ್ಣ ಕಾಮಗಾರಿ ತ್ವರಿತವಾಗಿ ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಅದಕ್ಕಿಂತ ಮುಖ್ಯವಾಗಿ ಇಲ್ಲಿನ ಜನರೂ ಸಾಕಷ್ಟು ಕಾಳಜಿ ವಹಿಸಬೇಕು ಎಂದು ಅಶ್ವಥನಾರಾಯಣ ಹೇಳಿದರು.
ಶಾಲೆ-ಕಾಲೇಜುಗಳು, ನಾಗರಿಕರು ಜತೆ ಸೇರಬೇಕು. ಈ ಐತಿಹಾಸಿಕ ಸ್ಮಾರಕ ನಮ್ಮದು ಎಂಬ ಭಾವನೆ ಎಲ್ಲರಲ್ಲಿ ಬೆಳೆಯಬೇಕು. ಕೋಟೆಯಿಂದ ಕಲ್ಲುಗಳನ್ನು ಕೊಂಡೊಯ್ದಿರುವ ಪ್ರಕರಣಗಳು ನಡೆದಿವೆ. ನಮ್ಮ ಮನೆ, ಆಸ್ತಿ ರೀತಿ ಕಾಪಾಡುವುದಕ್ಕಿಂತ ಹೆಚ್ಚಾಗಿ ಇವುಗಳ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.
ಕೆಂಪೇಗೌಡರ ಕಾಲದ ದೇಗುಲ ಮತ್ತು ಕೋಟೆ, ಎಲ್ಲ ದುರ್ಗ, ಕೆರೆ ಕಟ್ಟಡಗಳ ಸಂರಕ್ಷಣೆ ಆಗಬೇಕು. ಕೆಂಪೇಗೌಡರು ಮಾಡಿದ ಎಲ್ಲ ಸತ್ಕಾರ್ಯಗಳನ್ನು ಕಾರ್ಯ ರೂಪಕ್ಕೆ ತಂದು, ಎಲ್ಲವನ್ನು ನಮ್ಮ ಕಣ್ಣು ಮುಂದೆ ನೋಡುವ ರೀತಿಯಲ್ಲಿ ನಾವು ಕೆಲಸ ಮಾಡುತ್ತೇವೆ. ಅದಕ್ಕೆ ಸಂಪೂರ್ಣವಾಗಿ ತಯಾರಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಪ್ರವಾಸೋದ್ಯಮದಿಂದ ಹೆಚ್ಚು ಉದ್ಯೋಗ: ಪ್ರವಾಸೋದ್ಯಮದಿಂದ ಅತಿ ಹೆಚ್ಚು ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಾಧ್ಯ. ಈ ಕಲ್ಪನೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿದೆ ಎಂದು ಚನ್ನಪಟ್ಟಣದ ಗೊಂಬೆ ಕಾರ್ಖಾನೆಗೆ ಭೇಟಿ ನೀಡಿ, ಅಲ್ಲಿನ ಮಾಲಕರು ಹಾಗೂ ಕಾರ್ಮಿಕರೊಂದಿಗೆ ಅವರು ಸಮಾಲೋಚನೆ ನಡೆಸಿ ಮಾತನಾಡಿದರು.
ವೀಸಾ ವ್ಯವಸ್ಥೆಯಲ್ಲಿ ಸುಧಾರಣೆ ಆದ ನಂತರ ಪ್ರವಾಸಿಗರ ಸಂಖ್ಯೆ ಶೇ.50 ಹೆಚ್ಚಿದೆ. ಕೌಶಲ್ಯ ಇರುವ ಜನರು ಹಾಗೂ ಪ್ರವಾಸಿಗರ ನಡುವೆ ಒಂದು ವೇದಿಕೆ ಸೃಷ್ಟಿಸಲಾಗುವುದು. ಕರಕುಶಲ ಗ್ರಾಮ ನಿರ್ಮಾಣ ಆಗಿದೆ. ಇಲ್ಲಿ ಉತ್ಪಾದನೆ ನಡೆಯುತ್ತಿದೆ. ಜೊತೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಪ್ರದರ್ಶನ ಹಾಗೂ ಮಾರಾಟ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸರಕಾರ ಹೆಚ್ಚು ಒತ್ತು ನೀಡುವುದು. ಮುಖ್ಯವಾಗಿ ನಮ್ಮ ಸಂಸ್ಕೃತಿಯನ್ನು ಮನೆಮನೆಗೆ ತಲುಪಿಸಲಾಗುವುದು. ಸಂಸ್ಕೃತಿ ಉಳಿಸುವುದು ನಮ್ಮ ಕರ್ತವ್ಯ ಎಂದು ಅಶ್ವಥ್ ನಾರಾಯಣ ತಿಳಿಸಿದರು.
ಜಿಎಸ್ಟಿಯಿಂದ ತೊಂದರೆ ಆಗಿಲ್ಲ: ಜಿಎಸ್ಟಿ ಜಾರಿ ನಂತರ ಹಲವು ಸಣ್ಣ ಗೊಂಬೆ ಕಾರ್ಖಾನೆಗಳು ಮುಚ್ಚಿವೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವ್ಯಾಟ್ ವ್ಯವಸ್ಥೆ ಇದ್ದಾಗ ಶೇ.35-80ರಷ್ಟು ತೆರಿಗೆ ಇತ್ತು. ಈಗ ನೇರವಾಗಿ ತೆರಿಗೆ ಪಾವತಿ ಆಗುತ್ತಿದೆ. ಇದು ಸರಳ ವ್ಯವಸ್ಥೆ. ದೇಶದುದ್ದಗಲಕ್ಕೂ ಈಗ ಮಾರುಕಟ್ಟೆ ಸೃಷ್ಟಿಯಾಗಿದೆ ಎಂದು ಅವರು ಹೇಳಿದರು.
ಹಿಂದೆ ಕರ್ನಾಟಕದ ವ್ಯಾಪ್ತಿಯಿಂದ ಹೊರಗೆ ಬಂದ ಕೂಡಲೇ ತೆರಿಗೆ ಪಾವತಿಸಬೇಕಿತ್ತು. ಈಗ ಅಂತಹ ವಾತಾವರಣ ಇಲ್ಲ. ಇದು ಕ್ರಾಂತಿಕಾರಿ ತೆರಿಗೆ ಸುಧಾರಣೆ. ಬದಲಾವಣೆ, ಸರಳೀಕರಣಕ್ಕೆ ಸಾಧ್ಯತೆ ಇದ್ದು, ಸುಧಾರಣೆ ತರೋಣ. ಒಂದು ದೇಶ ಒಂದು ತೆರಿಗೆ ವ್ಯವಸ್ಥೆ ಇದೆ ಎಂದು ಅಶ್ವಥ್ ನಾರಾಯಣ ತಿಳಿಸಿದು.







