17ನೇ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಸಯನೈಡ್ ಮೋಹನ್ ಆರೋಪ ಸಾಬೀತು
![17ನೇ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಸಯನೈಡ್ ಮೋಹನ್ ಆರೋಪ ಸಾಬೀತು 17ನೇ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಸಯನೈಡ್ ಮೋಹನ್ ಆರೋಪ ಸಾಬೀತು](https://www.varthabharati.in/sites/default/files/images/articles/2019/10/22/215975-1571755841.jpg)
ಮಂಗಳೂರು, ಅ. 22: ಯುವತಿಯರ ಸರಣಿ ಹಂತಕ ಸಯನೈಡ್ ಮೋಹನ್ ಕುಮಾರ್ನ 17ನೇ ಪ್ರಕರಣದ ಆರೋಪವು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ಅ. 24ರಂದು ಪ್ರಕಟವಾಗುವ ಸಾಧ್ಯತೆ ಇದೆ.
ಪ್ರಕರಣದ ಆರೋಪಿ ಮೋಹನ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 366 (ಅತ್ಯಾಚಾರ), ಸೆಕ್ಷನ್ 302 (ಕೊಲೆ), ಸೆಕ್ಷನ್ 328 (ವಿಷ ಉಣಿಸಿದ್ದು), ಸೆಕ್ಷನ್ 392 (ಚಿನ್ನಾಭರಣ ಸುಲಿಗೆ), ಸೆಕ್ಷನ್ 394 (ವಿಷ ಉಣಿಸಿ ಸುಲಿಗೆ), ಸೆಕ್ಷನ್ 417 (ವಂಚನೆ), ಸೆಕ್ಷನ್ 207 (ಸಾಕ್ಷ್ಯನಾಶ)ದ ಅಪರಾಧ ಸಾಬೀತುಪಡಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮೋಹನ್ ವಿರುದ್ಧ ದಾಖಲಾಗಿದ್ದ ಎಲ್ಲ ಆರೋಪ ಈ ಪ್ರಕರಣದಲ್ಲಿ ಸಾಬೀತಾಗಿದೆ.
ಪ್ರಕರಣ ಹಿನ್ನೆಲೆ
ಬಿ.ಸಿ.ರೋಡ್ ಬಸ್ ತಂಗುದಾಣದಲ್ಲಿ ಬಂಟ್ವಾಳ ತಾಲೂಕಿನ ಬಾಳೆಪುಣಿಯ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಯುವತಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅಂಗನವಾಡಿ ಸಭೆ ಹಾಗೂ ಸಂಬಳಕ್ಕಾಗಿ ಬಿ.ಸಿ.ರೋಡ್ಗೆ ಬಂದಿದ್ದಾಗ ಆಕೆಯ ಬಳಿ ತನ್ನನ್ನು ‘ಆನಂದ’ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮದೇ ಜಾತಿಯವನಾಗಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ. ಆಕೆಯೊಂದಿಗೆ ಎಲ್ಲ ಚಿನ್ನಾಭರಣ ಧರಿಸಿ ಬರಲು ಹೇಳಿದ್ದ. ಅದರಂತೆ 2005ರ ಅ.21ರಂದು ಸಹೋದ್ಯೋಗಿಗಳೊಂದಿಗೆ ಶೃಂಗೇರಿಗೆ ಪಿಕ್ನಿಕ್ಗೆ ಹೋಗುವುದಾಗಿ ತಿಳಿಸಿ ಬೆಳಗ್ಗೆ ಬಿ.ಸಿ.ರೋಡ್ಗೆ ಬಂದ ಆಕೆಯನ್ನು ಬಸ್ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದ.
ಅವರಿಬ್ಬರು ಬೆಂಗಳೂರಿನ ಲಾಡ್ಜ್ವೊಂದರಲ್ಲಿ ಕೊಠಡಿ ಪಡೆದು ತಂಗಿದ್ದರು. ರಾತ್ರಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ. ಮರುದಿನ ಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆಕೆಗೆ ‘ಗರ್ಭ ನಿರೋಧಕ ಮಾತ್ರೆ’ ಎಂದು ತಿಳಿಸಿ ಸಯನೈಡ್ ನೀಡಿದ್ದ. ಅದನ್ನು ಸೇವಿಸಿದ್ದ ಆಕೆ ಪ್ಲಾಟ್ ನಂ.1ರಲ್ಲಿ ಬಿದ್ದಿದ್ದಾರೆ. ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದರು.
ಅ.27ರಂದು ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರು ಯಾರೂ ಬಾರದ ಕಾರಣ ಅಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿತ್ತು. ಅಲ್ಲಿನ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆ ಸಯನೈಡ್ ಸೇವಿಸಿರುವುದು ದೃಢಪಟ್ಟಿತ್ತು.
ಯುವತಿ ಬಸ್ ನಿಲ್ದಾಣದಲ್ಲಿ ಬಿದ್ದ ಬಳಿಕ ಮೋಹನ್ ತಾವು ತಂಗಿದ್ದ ರೂಮುಗೆ ತೆರಳಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಆ ಚಿನ್ನಾಭರಣವನ್ನು ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡಿದ್ದ.
ಯುವತಿಯ ಮನೆಯವರು ಎಲ್ಲ ಕಡೆ ಹುಡುಕಾಡಿದ್ದರು. ಅಂಗನವಾಡಿ ಸಮಿತಿಯ ಅಧ್ಯಕ್ಷರು ಈಕೆ ವ್ಯಕ್ತಿಯೋರ್ವನ ಜತೆ ಬಸ್ಗೆ ಹತ್ತುವುದನ್ನು ನೋಡಿದ್ದರು. ಅ.25ರಂದು ಮನೆಯವರು ಕೊಣಾಜೆ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು.
2009ರ ಸೆ.21ರಂದು ಆರೋಪಿಯ ಬಂಧನವಾಗಿ ವಿಚಾರಣೆ ನಡೆಸುತ್ತಿದ್ದಾಗ ಬಾಳೆಪುಣಿಯ ಯುವತಿಯನ್ನು ಬೆಂಗಳೂರಿನಲ್ಲಿ ಸಯನೈಡ್ ನೀಡಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಕೊಣಾಜೆ ಅಂದಿನ ಇನ್ಸ್ಪೆಕ್ಟರ್ ಲಿಂಗಪ್ಪ ಅವರು ಪ್ರಾಥಮಿಕ ಹಂತದಲ್ಲಿ ತನಿಖೆ ನಡೆಸಿದ್ದರು. ಆ ಬಳಿಕ ಸಿಒಡಿ ಇನ್ಸ್ಪೆಕ್ಟರ್ ವಜೀರ್ಸಾಬ್ ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಯಿದುನ್ನೀಸಾ 41 ಸಾಕ್ಷಿ ವಿಚಾರಣೆ ನಡೆಸಿ, 67 ದಾಖಲೆ ಪರಿಗಣಿಸಿ ಅಪರಾಧ ಸಾಬೀತು ಪಡಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಜುಡಿತ್ ಒ.ಎಂ. ಕ್ರಾಸ್ತ ವಾದಿಸಿದ್ದರು.