ಬೆಂಗಳೂರು: ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಎರಡನೇ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಧರಣಿ
ಆಹಾರದ ಗುಣಮಟ್ಟ ಸರಿಯಿಲ್ಲ ಎಂದು ಪ್ರತಿಭಟಿಸಿ ಅಮಾನತುಗೊಂಡಿದ್ದ ವಿದ್ಯಾರ್ಥಿ

ಆತ್ಮಹತ್ಯೆಗೆ ಶರಣಾದ ಹರ್ಷ
ಆನೇಕಲ್, ಅ,22: ಬೆಂಗಳೂರಿನ ಕಸವನಹಳ್ಳಿಯಲ್ಲಿರುವ ಖಾಸಗಿ ಕಾಲೇಜಿನ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆಗೈದ ವಿದ್ಯಾರ್ಥಿ ಪರವಾಗಿ ನ್ಯಾಯ ಕೊಡಿಸುವಂತೆ ಎರಡನೇ ದಿನವೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹಾಸ್ಟೆಲ್ ಮೂಲ ಸೌಲಭ್ಯಗಳು ಸಮರ್ಪಕವಾಗಿಲ್ಲ, ಆಹಾರದ ಗುಣಮಟ್ಟ ಸರಿಯಾಗಿಲ್ಲವೆಂದು ಆರೋಪಿಸಿದ 20 ಮಂದಿ ವಿದ್ಯಾರ್ಥಿಗಳನ್ನು ಕಾಲೇಜಿನ ಮೇಲ್ವಿಚಾರಕರು ಸಿಬ್ಬಂದಿ ಅಮಾನತುಗೊಳಿಸಿದ್ದರು. ಅಲ್ಲದೆ ತನಗೆ ಬಂದಿದ್ದ ಕೆಲಸದ ಆಫರ್ ಪತ್ರವನ್ನು ಹರಿದು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿ ಹರ್ಷ ಎಂಬ ವಿದ್ಯಾರ್ಥಿ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಘಟನೆ ಬಳಿಕ ವಿದ್ಯಾರ್ಥಿಗಳು ಕಾಲೇಜಿನ ವಿರುದ್ಧ ತಿರುಗಿ ಬಿದ್ದಿದ್ದು, ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ, ನಿನ್ನೆ ಸಂಜೆ ವೇಳೆಗೆ ಕಾಲೇಜು ಆಡಳಿತ ಮಂಡಳಿ 19 ವಿದ್ಯಾರ್ಥಿಗಳನ್ನು ಮರಳಿ ಕರೆಸಿ, ಅಮಾನತು ಆದೇಶ ಹಿಂಪಡೆದು ಶಿಕ್ಷೆ ವಿಧಿಸಿದ ಸಿಬ್ಬಂದಿಯನ್ನು ಅಮಾನತು ಮಾಡುವ ಭರವಸೆ ನೀಡಿದ್ದರು. ಆದರೆ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಯಾವುದೇ ಪರಿಹಾರ ಘೋಷಿಸಿಲ್ಲ ಎಂದು ಆರೋಪಿಸಿ ಇಂದು ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹರ್ಷನ ಕುಟುಂಬಕ್ಕೆ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಧರಣಿ ಕುಳಿತರು.
ಇದಕ್ಕೆ ಮಣಿದ ಅಮೃತಾನಂದ ಕಾಲೇಜಿನ ಸಂಸ್ಥಾಪಕರು ಕೊಯಮತ್ತೂರಿನಿಂದ ವಿದ್ಯಾರ್ಥಿಗಳೊಡನೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿ, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಆದರೂ ಪಟ್ಟು ಬಿಡದ ವಿದ್ಯಾರ್ಥಿಗಳು ಧರಣಿ ಮುಂದುವರಿಸಿದ್ದಾರೆ.