ಕಾವೇರಿ ಕೂಗು ಯೋಜನೆ ತಡೆ ಕೋರಿ ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಮೂರ್ತಿ
ಬೆಂಗಳೂರು, ಅ.22: ಈಶ ಫೌಂಡೇಶನ್ ‘ಕಾವೇರಿ ಕೂಗು’ ಯೋಜನೆಗಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠದ ಸಹ ನ್ಯಾಯಮೂರ್ತಿಯಾಗಿದ್ದ ಎಸ್.ಆರ್.ಕೃಷ್ಣಕುಮಾರ್ ಹಿಂದೆ ಸರಿದಿದ್ದಾರೆ.
ಮಂಗಳವಾರ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಾಗ, ಅವರು ತಾವು ವಿಚಾರಣೆ ಹಿಂದೆ ಸರಿಯುವುದಾಗಿ ಪ್ರಕಟಿಸಿದರು. ಇದರಿಂದ ಪ್ರಕರಣವನ್ನು ಬೇರೊಂದು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವಂತೆ ರಿಜಿಸ್ಟ್ರಾರ್ಗೆ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.
ಆಕ್ಷೇಪಣೆ ಏನು: ಕಾವೇರಿ ತಟದ 639 ಕಿ.ಮೀ ಉದ್ದಗಲಕ್ಕೂ 253 ಕೋಟಿ ಗಿಡ ನೆಡಲು ಈಶ ಫೌಂಡೇಶನ್ ಉದ್ದೇಶಿಸಿದೆ. ಇದಕ್ಕಾಗಿ ಸಾರ್ವಜನಿಕರಿಂದ 1 ಗಿಡಕ್ಕೆ 42 ರೂ.ಪಡೆಯಲು ಮುಂದಾಗಿದೆ. ಇದರ ಒಟ್ಟು ಮೊತ್ತ 10,626 ಕೋಟಿ ಆಗುತ್ತದೆ. ಇದೊಂದು ಆತಂಕಕಾರಿ ವಿಚಾರ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಈ ಅರ್ಜಿ ಇತ್ಯರ್ಥವಾಗುವ ತನಕ ಈಶ ಫೌಂಡೇಶನ್ ಕಾವೇರಿ ಕೂಗು ಯೋಜನೆಯಡಿ ಯಾವುದೇ ಹಣ ಸಂಗ್ರಹ ಮಾಡದಂತೆ ತಡೆ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.