ವೈದ್ಯನಿಂದ ಹಣ ವಸೂಲಿ, ಬೆದರಿಕೆ ಆರೋಪ: ದಂಪತಿ ಬಂಧನ

ಬೆಂಗಳೂರು, ಅ.23: ದಂತ ವೈದ್ಯನೊಬ್ಬನಿಂದ ಹಣ ವಸೂಲಿ ಮಾಡಿ, ಬೆದರಿಕೆ ಹಾಕಿದ ಆರೋಪದ ಮೇಲೆ ದಂಪತಿಯನ್ನು ಇಲ್ಲಿನ ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ಮಲ್ಲೇಶ್ವರಂ ನಿವಾಸಿಗಳಾದ ಲೀನಾ ಕವಿತಾ(43), ಪ್ರಮೋದ್ ಕುಮಾರ್(45) ಬಂಧಿತ ದಂಪತಿ ಎಂದು ಪೊಲೀಸರು ತಿಳಿಸಿದ್ದಾರೆ.
21 ವರ್ಷದ ಯುವತಿಯನ್ನು ಡೇಟಿಂಗ್ ಆ್ಯಪ್ ಮೂಲಕ ದಂತ ವೈದ್ಯರೊಬ್ಬರು ಪರಿಚಯ ಮಾಡಿಕೊಂಡಿದ್ದರು. ನಂತರ, ಇಬ್ಬರ ನಡುವೆ ಸ್ನೇಹವಾಗಿದ್ದು, ಇದನ್ನು ತಿಳಿದ ಯುವತಿಯ ಪೋಷಕರಾದ ಲೀನಾ ಕವಿತಾ ಮತ್ತು ಪ್ರಮೋದ್ ಕುಮಾರ್, ವೈದ್ಯನ ಪೋಷಕರ ಹೆಸರು, ವಿಳಾಸ ಪಡೆದು, ಹಣ ನೀಡದಿದ್ದರೆ ಯುವತಿ ಮತ್ತು ವೈದ್ಯ ಇರುವ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಬಳಿಕ ವೈದ್ಯನ ಪೋಷಕರಿಂದ ಲಕ್ಷಾಂತರ ಹಣ ಪಡೆದಿದ್ದು, ಇನ್ನೂ ಹೆಚ್ಚಿನ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.





