ದುಬಾರೆ ರೆಸಾರ್ಟ್‌ಗೆ ಅನುಮತಿ ಬಗ್ಗೆ ಮಾಹಿತಿ ನೀಡಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು, ಅ.23: ಕೊಡಗು ಜಿಲ್ಲೆಯ ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿರುವ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗೆ ಕೇಂದ್ರ ಸರಕಾರದಿಂದ ಅಗತ್ಯ ಅನುಮತಿ ಪಡೆಯಲಾಗಿದೆಯೋ ಅಥವಾ ಇಲ್ಲವೋ ಎಂಬುದರ ಕುರಿತು ಮಾಹಿತಿ ನೀಡಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಈ ಕುರಿತು ಕೊಡಗಿನ ವಿರೂಪಾಕ್ಷಪುರದ ಪಿ.ಎಸ್.ಮೋಹನ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಪರ ವಾದಿಸಿದ ವಕೀಲರು, ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗೆ ಅನುಮತಿ ಕೋರಿ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಅರ್ಜಿ ಸಲ್ಲಿಸಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ರೆಸಾರ್ಟ್ ನಡೆಸಲು ಅನುಮತಿ ಪಡೆಯಲಾಗಿರುವ ಬಗ್ಗೆ ಮಾಹಿತಿ ನೀಡಲು ರಾಜ್ಯ ಸರಕಾರಕ್ಕೆ ಸೂಚಿಸಿತು. ನಿಯಮದಂತೆ ಅರಣ್ಯ ಪ್ರದೇಶದಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸುವಂತಿಲ್ಲ. ಒಂದು ವೇಳೆ ನಡೆಸಬೇಕಾದರೂ ಕೇಂದ್ರ ಸರಕಾರದ ಅನುಮತಿ ಕಡ್ಡಾಯ. ಆದರೆ, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗೆ ಅನುಮತಿ ಪಡೆದಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅರಣ್ಯ ಸಂರಕ್ಷಣಾ ಕಾಯಿದೆ 1980ರ ಸೆಕ್ಷನ್ 2ರ ಪ್ರಕಾರ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಕೇಂದ್ರದಿಂದ ಅನುಮತಿ ಪಡೆಯಬೇಕು. ಆದರೆ, ಅನುಮತಿ ಪಡೆಯದೇ ರೆಸಾರ್ಟ್ ನಡೆಸಲಾಗುತ್ತಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.







