ಉಪ ಚುನಾವಣೆಗಳಿಗೆ ಬಿಜೆಪಿ ತಯಾರಿ ಆರಂಭ: ಅರವಿಂದ ಲಿಂಬಾವಳಿ
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ

ಬೆಂಗಳೂರು, ಅ.23: ಅನರ್ಹ ಶಾಸಕರಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ತಿಂಗಳು ನಡೆಯಲಿರುವ ಉಪ ಚುನಾವಣೆಗೆ ಬಿಜೆಪಿ ಸಿದ್ಧತೆ ಕೈಗೊಂಡಿದ್ದು, ಚುನಾವಣೆ ತಯಾರಿ ನಡೆಸಿಕೊಳ್ಳುವಂತೆ ಸೂಚಿಸಲಾಗಿದೆ.
ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ, ದಕ್ಷಿಣ ಕರ್ನಾಟಕ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪ್ರಮುಖ ಮುಖಂಡರ ಕ್ಷೇತ್ರವಾರು ಸಭೆ ನಡೆದಿದೆ. ಅವರ ಭಾವನೆಗಳನ್ನ ರಾಜ್ಯ ನಾಯಕರು ಕೇಳಿದ್ದು, ಸಮರ್ಪಕ ತಯಾರಿ ಕೈಗೊಳ್ಳುವ ಸಂಬಂಧ ಚರ್ಚೆಯಾಗಿದೆ ಎಂದರು. ಎಲ್ಲ ಮಖಂಡರು ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಚುನಾವಣೆ ತಯಾರಿ ನಡೆಸುವಂತೆ ಎಲ್ಲರಿಗೂ ತಿಳಿಸಿದ್ದೇವೆ. ಅ.26 ಕ್ಕೆ ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳ ಕುರಿತು ಸಭೆ ನಡೆಯಲಿದೆ. ಅನಂತರ ಅಲ್ಲಿಯೂ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಹೇಳಿದರು.
ನಾವು ಮತ್ತು ರಾಜ್ಯಾಧ್ಯಕ್ಷರು ಉಪಚುನಾವಣೆ ಬಗ್ಗೆ ಸಿದ್ದತೆ ನಡೆಸಲಾಯಿತು. ಇಂದಿನ 8 ಕ್ಷೇತ್ರದ ಸಭೆಯಲ್ಲಿ ಯಾವುದೇ ಒಡಕಿಲ್ಲದೇ ಒಮ್ಮತದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಪಕ್ಷದ ಅಭ್ಯರ್ಥಿ ಬಗ್ಗೆ ಚುನಾವಣೆ ಕೆಲಸ ಮಾಡುವುದಾಗಿ ಮುಖಂಡರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪಕ್ಷದ ಕಾರ್ಯಕರ್ತರು ಪ್ರವಾಹ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಲು ಸೂಚಿಸಲಾಗಿದೆ. ಸರಕಾರದಿಂದ ಈ ಹಿಂದಿನಂತೆ ನೆರೆ ಪರಿಹಾರ ನೀಡಲಾಗುವುದು. ಅಗತ್ಯವಿರುವ ಕಡೆಗಳಲ್ಲಿ ಶೆಡ್‌ಗಳನ್ನು ನಿರ್ಮಿಸಲಾಗುವುದು. ಇಂದು ವಿಡಿಯೋ ಸಂವಾದ ನಡೆಸಿ ಅಧಿಕಾರಿಗಳ ಜೊತೆ ಮಾತನಾಡಿ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಸಭೆಗೆ 8 ಸದಸ್ಯರು ಗೈರು: ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಸಭೆಯಲ್ಲಿದ್ದರು. ಆದರೆ, ಕೋರ್ ಕಮಿಟಿ ಸದಸ್ಯರಾದ ಬಿ.ಎಲ್. ಸಂತೋಷ್, ಡಿ.ವಿ. ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ಆರ್.ಅಶೋಶ್, ಸಿ.ಎಂ. ಉದಾಸಿ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ ಗೈರಾಗಿದ್ದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಜಾಮೀನು ಅಷ್ಟೇ ಸಿಕ್ಕಿದೆ, ಪ್ರಕರಣ ವಜಾಗೊಂಡಿಲ್ಲ. ಇದನ್ನು ಅವರ ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು. ಈ ಪ್ರಜಾಪ್ರಭುತ್ವದಲ್ಲಿ ಅವರ ಅವ್ಯವಹಾರಗಳು ಬಯಲಾಗಿವೆ. ಕೋರ್ಟ್‌ನಲ್ಲಿ ವಿಚಾರಣೆಯಿದ್ದು, ನ್ಯಾಯಾಂಗದ ಮೇಲೆ ನಮಗೆ ಗೌರವವಿದೆ.
-ಆರ್.ಅಶೋಕ್, ಕಂದಾಯ ಸಚಿವ







