ಸಾಲಬಾಧೆ ತಾಳಲಾರದೆ ವ್ಯಾಪಾರಿ ಆತ್ಮಹತ್ಯೆ

ಮೈಸೂರು,ಅ.23: ಸಾಲಬಾಧೆ ತಾಳಲಾರದೆ ನಂಜನಗೂಡು ನಗರದ ವ್ಯಾಪಾರಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತರನ್ನು ಚಾಮುಂಡಿ ಟೌನ್‍ಶಿಪ್ ಬಡಾವಣೆ ನಿವಾಸಿ, ಸೂರ್ಯ ಟ್ರೇಡರ್ಸ್ ಮಾಲಕ ಲೋಹಿತ್(40) ಎಂದು ಗುರುತಿಸಲಾಗಿದೆ.
'ವ್ಯಾಪಾರದ ಉದ್ದೇಶಕ್ಕಾಗಿ ಅಂಗಡಿ ಮೇಲೆ ಕೈಸಾಲ ತೆಗೆದುಕೊಂಡಿದ್ದಲ್ಲದೆ ಇತ್ತೀಚೆಗೆ ನೂತನವಾಗಿ ಮನೆ ನವೀಕರಣ ಮಾಡುವ ಸಲುವಾಗಿಯೂ ಖಾಸಗಿಯಾಗಿ ಸಾಲ ಮಾಡಿದ್ದರು. ಇದರಿಂದ ಚಿಂತೆಗೊಳಗಾಗಿದ್ದರು. ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದ ಅವರು ಬೆಳಗಿನ ಜಾವ ಮನೆಯಲ್ಲಿ ಕಾಣಲಿಲ್ಲ. ಗಾಬರಿಗೊಂಡು ಹುಡುಕಾಟ ನಡೆಸಿದಾಗ ಮನೆಯ ಮೇಲ್ಭಾಗದಲ್ಲಿರುವ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು' ಎಂದು ಮೃತರ ಪತ್ನಿ ಕವಿತಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ವೃತ್ತ ನಿರೀಕ್ಷಕ ಶೇಖರ್ ನೇತೃತ್ವದಲ್ಲಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಿದರು.





